ಶೃಂಗೇರಿ: ಮೆಣಸೆಯಲ್ಲಿರುವ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಶ್ರೀಭಾರತೀತೀರ್ಥ ಶಾಸ್ತ್ರ ಸಮುತ್ಕರ್ಷ ಕೇಂದ್ರ (ರಾಜೀವಗಾಂಧೀ ಪರಿಸರ)ದ ನೂತನ ನಿರ್ದೇಶಕರಾಗಿ ಪ್ರೊ. ಸುಬ್ರಾಯ ವಿ. ಭಟ್ಟರು ಕಳೆದ ಸೋಮವಾರ ಪದಗ್ರಹಣವನ್ನು ಮಾಡಿದರು. ಈ ಹಿಂದೆ ಎರಡು ವರ್ಷಗಳಿಂದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರೊ. ಹಂಸಧರ ಝಾ ಅವರಿಂದ ಅಧಿಕಾರವನ್ನು ಸ್ವೀಕರಿಸಿದ ಪ್ರೊ. ಸುಬ್ರಾಯ ಭಟ್ಟರು, ಪೂರ್ವಮೀಮಾಂಸಾ ಮತ್ತು ಧರ್ಮಶಾಸ್ತ್ರಗಳಲ್ಲಿ ದೇಶದಲ್ಲಿ ಬೆರಳೆಣಿಕೆಯಷ್ಟಿರುವ ವಿದ್ವಾಂಸರಲ್ಲಿ ಒಬ್ಬರು. ಶೈಕ್ಷಣಿಕ ರಂಗದಲ್ಲಿ 30 ವರ್ಷಕ್ಕೂ ಹೆಚ್ಚಿನ ಅನುಭವವನ್ನು ಹೊಂದಿರುವ ಇವರು ಇದೀಗ ಪರಿಸರದ ನಿರ್ದೇಶಕರಾಗಿ ಎರಡನೆಯ ಬಾರಿ ಜವಾಬ್ದಾರಿಯನ್ನು ಸ್ವೀಕರಿಸಿದ್ದಾರೆ.
ಪ್ರೊ. ಸುಬ್ರಾಯ ಭಟ್ ಅವರು ನೂತನ ನಿರ್ದೇಶಕರಾಗಿ ಪದಗ್ರಹಣವನ್ನು ಮಾಡಿರುವ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿರುವ ಪರಿಸರದ ಸದಸ್ಯರು, ಇವರ ಆಡಳಿತದ ಅವಧಿಯಲ್ಲಿ ಶ್ರೀಭಾರತೀತೀರ್ಥ ಶಾಸ್ತ್ರ ಸಮುತ್ಕರ್ಷ ಕೇಂದ್ರದ ಸರ್ವತೋಮುಖ ಬೆಳವಣಿಗೆಯ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಶ್ರೀನಿವಾಸವರಖೇಡಿಯವರ ಸಂಕಲ್ಪದಂತೆ ಗುರುಕುಲದ ಮಾದರಿಯಲ್ಲಿ ಶಾಸ್ತ್ರದ ಅಧ್ಯಯನವನ್ನು ಮಾಡುವ ಉದ್ದೇಶದೊಂದಿಗೆ, ಶೃಂಗೇರಿ ದಕ್ಷಿಣಾಮ್ನಾಯ ಶಾರದಾಪೀಠದ ಜಗದ್ಗುರುಗಳಾದ ಶ್ರೀಶ್ರೀವಿಧುಶೇಖರ ಭಾರತೀಯವರ ಕರಕಮಲಗಳಿಂದ ಕಳೆದ ಆಗಷ್ಟಿನಲ್ಲಿ ಶ್ರೀಭಾರತೀತೀರ್ಥ ಶಾಸ್ತ್ರಸಮುತ್ಕರ್ಷಕೇಂದ್ರದ ಸ್ಥಾಪನೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಪರಿಸರವು ಶಾಸ್ತ್ರಗಳ ಅಧ್ಯಯನಕ್ಕೆ ಹೆಚ್ಚಿನ ಒತ್ತು ಕೊಡಲಿದ್ದು, ಶಾಸ್ತ್ರವನ್ನು ಆಳವಾಗಿ ಓದಿಕೊಂಡ ವಿದ್ವಾಂಸರನ್ನು ತಯಾರು ಮಾಡುವ ಉದ್ದೇಶವನ್ನು ಇಟ್ಟುಕೊಂಡಿದೆ.
ಪ್ರಕೃತ ನೂತನ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಪ್ರೊ. ಸುಬ್ರಾಯ ಭಟ್ಟರು, “ಶ್ರೀಭಾರತೀತೀರ್ಥ ಶಾಸ್ತ್ರಸಮುತ್ಕರ್ಷಕೇಂದ್ರವು ದಕ್ಷಿಣಾಮ್ನಾಯ ಶಾರದಾಪೀಠದ ಉಭಯ ಜಗದ್ಗುರುಗಳ ಆಶೀರ್ವಾದದೊಂದಿಗೆ ಮತ್ತು ಕುಲಪತಿಗಳ ದೃಢ ಸಂಕಲ್ಪದಂತೆ, ಇನ್ನು ಮುಂದೆ ಶಾಸ್ತ್ರದ ಆಳವಾದ ಅಧ್ಯಯನಕ್ಕೆ ತೆರೆದುಕೊಳ್ಳಲಿದೆ. ಬೆಳಿಗ್ಗೆ ಐದು ಘಂಟೆಯಿಂದ ರಾತ್ರಿ ಹತ್ತು ಘಂಟೆಯವರೆಗೆ ಶಾಸ್ತ್ರದ ಅಧ್ಯಯನ-ಅಧ್ಯಾಪನಗಳು ನಡೆಯಲಿದ್ದು, ಗುರುಕುಲದ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ಕೆಲವೇ ವರ್ಷಗಳಲ್ಲಿ ಸಂಸ್ಕೃತ ಮತ್ತು ಶಾಸ್ತ್ರಗಳಲ್ಲಿ ಆಳವಾಗಿ ಓದಿಕೊಂಡ ವಿದ್ವಾಂಸರ ನಿರ್ಮಾಣ ಕೇಂದ್ರವಾಗಿ ಇದು ಬದಲಾಗಲಿದೆ” ಎಂದು ಆಶಯ ವ್ಯಕ್ತಪಡಿಸಿದರು. ‘ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳನ್ನು ಸಂಸ್ಕೃತ ಹಾಗೂ ಶಾಸ್ತ್ರಗಳ ಅಧ್ಯಯನಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕಳುಹಿಸಿಕೊಡಬೇಕು’ ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
