ರಿಪ್ಪನ್ ಪೇಟೆ: ಗರ್ತಿಕೆರೆಯ ಖಾಸಗಿ ಶಾಲೆಯ ನರ್ಸರಿ ವಿಭಾಗದ ಮಕ್ಕಳನ್ನು ಹೊತ್ತು ತರುತ್ತಿರುವ ಶಾಲಾ ವಾಹನವು, ರಿಪ್ಪನ್ ಪೇಟೆ ಸಮೀಪದ ಕಾನುಗೋಡು ಗ್ರಾಮ ಬಳಿ ಇಂದು ಮುಂಜಾನೆ ಪಲ್ಟಿಯಾಗಿದೆ. ಶಾಲಾ ವಾಹನದಲ್ಲಿ ೧೨ ಮಕ್ಕಳಿದ್ದು ಅದೃಷ್ಟ ವಶಾತ್ ಜೀವ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಸ್ಥಳೀಯರು ಊಹಿಸಿರುವಂತೆ ಶಾಲಾ ವಾಹನದ ಚಾಲಕನ ನಿಯಂತ್ರಣ ತಪ್ಪಿ, ರಸ್ತೆಬದಿಗೆ ಜಾರಿದ್ದು ವಾಹನ ಪಲ್ಟಿ ಆಗಿರಬಹುದಾಗಿದೆ. ಒಂದು ಮಗುವಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಉಳಿದ ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.
ಮಕ್ಕಳ ಪೋಷಕರು ಹಾಗೂ ಸಾರ್ವಕನಿರಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದ್ದು, ಮುಂದಿನ ದಿನಗಳಲ್ಲಿ ಮಕ್ಕಳನ್ನು ಕರೆತರುವ ವಾಹನದ ಚಾಲಕರು ಸುರಕ್ಷಿತವಾಗಿ ವಾಹನ ಚಲಾಯಿಸುವಂತೆ ಹಾಗೂ ವೇಗದ ಮಿತಿಯನ್ನು, ನಿಯಮ ಪಾಲನೆಯನ್ನು ಹಾಗೆಯೇ ರಸ್ತೆ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಶಾಲಾ ವಾಹನವನ್ನು ಚಲಾಯಿಸುವುದು ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.
ಮತ್ತೊಂದೆಡೆ ಶಾಲಾ ಆಡಳಿತವು ವಾಹನಗಳ ತಾಂತ್ರಿಕ ಪರಿಶೀಲನೆ, ಬ್ರೇಕ್, ಟೈರ್ ಮತ್ತು ಸ್ಟೇರಿಂಗ್ ಸೇರಿದಂತೆ ಎಲ್ಲಾ ಭಾಗಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಖಚಿತ ಪಡಿಸಿಕೊಳ್ಳುವುದು ಅಗತ್ಯವಾಗಿದೆ. ಇಂತಹ ಘಟನೆಗಳು ಮರುಕಳಿಸದ ರೀತಿಯಲ್ಲಿ ನೋಡಿಕೊಳ್ಳುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ
