
ಚಿಕ್ಕಮಗಳೂರು: ಕಾಡಾನೆಗಳ ಹಾವಳಿ ನಿಯಂತ್ರಿಸಲು ಆರಂಭಿಸಿದ್ದ ಕಾರ್ಯಾಚರಣೆ ಇದೀಗ ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳ ನಡುವಿನ ಜಟಾಪಟಿಗೆ ಕಾರಣವಾಗಿದೆ. ಹಾಸನ ಜಿಲ್ಲೆಯ ಬೇಲೂರು ಭಾಗದಲ್ಲಿ ಕಾಡಾನೆಗಳನ್ನು ಸೆರೆಹಿಡಿದು ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸುವ ಕಾರ್ಯಾಚರಣೆ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಚಿಕ್ಕಮಗಳೂರು ಭಾಗದ ಶಾಸಕರು ಹಾಗೂ ರೈತರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಭದ್ರಾ ಅಭಯಾರಣ್ಯದತ್ತ ತೆರಳಿದ್ದ 38 ಕಾಡಾನೆಗಳ ಹಿಂಡು ಮತ್ತೆ ಬೇಲೂರು ತಾಲ್ಲೂಕಿಗೆ ವಾಪಸಾಗಿದೆ. ನವೆಂಬರ್ 14 ಮತ್ತು 16ರಂದು ಮೂರು ದಿನಗಳ ಅಂತರದಲ್ಲಿ ಇಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಬೇಲೂರು ಭಾಗದ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಜಗಬೋರನಹಳ್ಳಿ, ಬಿಕ್ಕೋಡು, ಅರಹಳ್ಳಿ ಸೇರಿದಂತೆ ಕಾಫಿ ತೋಟಗಳ ಪ್ರದೇಶಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಒಟ್ಟುಗೂಡಿಸಿ ಭದ್ರಾ ಅಭಯಾರಣ್ಯದತ್ತ ಓಡಿಸುವ ಕಾರ್ಯಾಚರಣೆ ಆರಂಭಿಸಲಾಗಿತ್ತು. ಸುಮಾರು 38 ಆನೆಗಳ ಹಿಂಡನ್ನು ಚಿಕ್ಕಮಗಳೂರು ಜಿಲ್ಲೆಯ ತತ್ಕೊಳ ಮೀಸಲು ಅರಣ್ಯದವರೆಗೂ ಕರೆದೊಯ್ಯಲಾಗಿತ್ತು. ಆದರೆ, ಚಿಕ್ಕಮಗಳೂರು ಭಾಗದ ಶಾಸಕರು ಹಾಗೂ ರೈತರು ಆನೆಗಳನ್ನು ತಮ್ಮ ಜಿಲ್ಲೆಗೆ ಸ್ಥಳಾಂತರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನವೆಂಬರ್ 21ರಿಂದ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಇದೀಗ ನಿನ್ನೆ ರಾತ್ರಿ ಚಿಕ್ಕಮಗಳೂರು ಸಿಸಿಎಫ್ ಮತ್ತು ಡಿಎಫ್ಒ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಇಟಿಎಫ್ ಸಿಬ್ಬಂದಿ ಆನೆಗಳನ್ನು ಮತ್ತೆ ಬೇಲೂರು ಭಾಗದತ್ತ ಓಡಿಸಿದ್ದಾರೆ. ಈ ವೇಳೆ ಹಾಸನ ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಇಟಿಎಫ್ ಸಿಬ್ಬಂದಿ ವಿರೋಧ ವ್ಯಕ್ತಪಡಿಸಿದರೂ, ಅದನ್ನು ಲೆಕ್ಕಿಸದೆ ಆನೆಗಳನ್ನು ಹಿಮ್ಮೆಟ್ಟಿಸಲಾಗಿದೆ. ಸದ್ಯ ಅರಮನೆ ಗುಡ್ಡ, ಪುಟ್ಟಮ್ಮನಗೊಳ್ಳ, ಮಲ್ಲಾಪುರ, ಕಾನಳ್ಳಿ ಹಾಗೂ ಅರಣ್ಯದ ಸುತ್ತಮುತ್ತ 38 ಕಾಡಾನೆಗಳ ಹಿಂಡು ಬೀಡುಬಿಟ್ಟಿದೆ. ಇನ್ನು, ಮುಡಿಗೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಅವರು ತಮ್ಮ ಕ್ಷೇತ್ರದ ಜನಪ್ರತಿನಿಧಿಗಳೊಂದಿಗೆ ಚರ್ಚಿಸದೆ ಅರಣ್ಯ ಇಲಾಖೆ ಏಕಪಕ್ಷೀಯವಾಗಿ ಕಾರ್ಯಾಚರಣೆ ಆರಂಭಿಸಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ, ಕಾರ್ಯಾಚರಣೆ ನಿಲ್ಲಿಸಿ ಆನೆಗಳನ್ನು ಹಿಂದಕ್ಕೆ ಕಳುಹಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದರು. ನವೆಂಬರ್ 23ರಂದು ವಿಧಾನಸಭೆ ಸ್ಪೀಕರ್ ಕಚೇರಿಗೆ ತೆರಳಿ ರಾಜೀನಾಮೆ ಪತ್ರವನ್ನೂ ಸಲ್ಲಿಸಿದ್ದರು. ಒಂದು ಜಿಲ್ಲೆಯ ಜನರ ಆತಂಕಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮತ್ತೊಂದು ಜಿಲ್ಲೆಯ ಜನರ ವಿರೋಧಕ್ಕೆ ಕಾರಣವಾಗಿದ್ದು, ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯಿಂದ ಕಾರ್ಯಾಚರಣೆ ಹಳ್ಳ ಹಿಡಿದಿದೆ. ಇದೀಗ 38 ಕಾಡಾನೆಗಳ ಹಿಂಡು ಮತ್ತೆ ಬೇಲೂರು ಭಾಗಕ್ಕೆ ವಾಪಸಾಗಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.




