
ಕೊಟ್ಟಿಗೆಹಾರ: ಲೋಕಕಲ್ಯಾಣ, ನಾಡಿನ ಸುಭಿಕ್ಷೆ ಹಾಗೂ ಸರ್ವರ ಒಳಿತಿನ ಸಂಕಲ್ಪದೊಂದಿಗೆ ಬೆಂಗಳೂರಿನ ಕಬ್ಬಳಮ್ಮ ಪಾದಯಾತ್ರೆ ಸಮಿತಿಯ 15 ಮಂದಿ ಭಕ್ತರು ಕೊಟ್ಟಿಗೆಹಾರದಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡರು. ಕಾರ್ತಿಕ ಮಾಸದ ಸೋಮವಾರದ ಅಂಗವಾಗಿ ಸೋಮವಾರ ಮುಂಜಾನೆ ಬೆಂಗಳೂರಿನ ಶೂಲಿನ್ ಹಿಲ್ ವ್ಯೂ ಹೇಮಂತ್, ಅನಿಲ್, ಗಿರೀಶ್, ಕೆಂಪರಾಜು ಸೇರಿದಂತೆ ಒಟ್ಟು 15 ಮಂದಿ ಭಕ್ತರು ಕೊಟ್ಟಿಗೆಹಾರದಿಂದ ತಮ್ಮ ಧಾರ್ಮಿಕ ನಡಿಗೆಯನ್ನು ಆರಂಭಿಸಿದರು. ಸಂಜೆ ವೇಳೆಗೆ ಧರ್ಮಸ್ಥಳ ತಲುಪಿ ಮಂಜುನಾಥ ಸ್ವಾಮಿಯ ದರ್ಶನ ಪಡೆಯುವ ಉದ್ದೇಶದಿಂದ ಪಾದಯಾತ್ರೆ ಮುಂದುವರಿಸಿದರು. ಕಬ್ಬಳಮ್ಮ ಪಾದಯಾತ್ರೆ ಸಮಿತಿಯಿಂದ ಹಮ್ಮಿಕೊಳ್ಳುತ್ತಿರುವ ಈ ಪಾದಯಾತ್ರೆ ಎರಡನೇ ವರ್ಷದ ಧಾರ್ಮಿಕ ನಡಿಗೆಯಾಗಿದೆ. ಈ ಕುರಿತು ಮಾತನಾಡಿದ ಹೇಮಂತ್, ಲೋಕಕಲ್ಯಾಣ, ನಾಡಿನ ಸುಭಿಕ್ಷೆ ಹಾಗೂ ಸರ್ವರ ಒಳಿತಿಗಾಗಿ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಎರಡನೇ ವರ್ಷವೂ ಭಕ್ತರೆಲ್ಲರೂ ಒಗ್ಗಟ್ಟಿನಿಂದ ಈ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು.




