ಚಿಕ್ಕಮಗಳೂರು: ನಗರದ ಹೊರವಲಯದ ಗೌಡನಹಳ್ಳಿ ಸಮೀಪದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕಾರ್ಖಾನೆಗಳಿಂದ ಉಂಟಾಗುತ್ತಿರುವ ವಾಯು ಮತ್ತು ಜಲಮಾಲಿನ್ಯ ಖಂಡಿಸಿ ಗ್ರಾಮಸ್ಥರು ಕಳೆದ 13 ದಿನಗಳಿಂದ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾರ್ಖಾನೆಗಳಿಂದ ಹೊರಬರುತ್ತಿರುವ ಹೊಗೆ ಹಾಗೂ ಕಲುಷಿತ ನೀರಿನಿಂದ ಸುತ್ತಮುತ್ತಲಿನ ಎರಡು ಗ್ರಾಮಗಳ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ. ಕಳೆದ ಎರಡು ವರ್ಷಗಳಲ್ಲಿ 80ಕ್ಕೂ ಹೆಚ್ಚು ಜನರು ಹಾಗೂ ನೂರಾರು ರಾಸುಗಳು ಮೃತಪಟ್ಟಿವೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಸ್ತೆಯ ಮಧ್ಯೆಯೇ ರಾಸುಗಳನ್ನು ಕಟ್ಟಿ, ಮೇವು ಹಾಕುವ ಮೂಲಕ ರೈತರು ವಿನೂತನವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಶಾಲಾ ಸಮವಸ್ತ್ರದಲ್ಲಿಯೇ ಮಕ್ಕಳು ಕೂಡ ಶಾಲೆಗೆ ತೆರಳದೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಪ್ರತಿಭಟನೆ ನಡೆಯುತ್ತಿದ್ದ ವೇಳೆ ಮಹಿಳೆಯೊಬ್ಬರು ಏಕಾಏಕಿ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದು, ಇತರ ಮಹಿಳೆಯರು ಅವರನ್ನು ಹೊತ್ತುಕೊಂಡು ಹೋಗಿದ್ದಾರೆ. ಚಿಕ್ಕಮಗಳೂರು ನಗರದಿಂದ ಕೂಗಳತೆಯ ದೂರದಲ್ಲಿರುವ ಇಂಡಸ್ಟ್ರಿಯಲ್ ಏರಿಯಾದ ಕಾರ್ಖಾನೆಗಳಿಂದ ಗ್ರಾಮಸ್ಥರ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.
