
ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಜನರಿಗೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ನಿಂದ ಸಿಹಿಸುದ್ದಿ ಸಿಕ್ಕಿದೆ. ಇಂಡಿಯನ್ ಆಯಿಲ್ನ ಮಾರ್ಕೆಟಿಂಗ್ ವಿಭಾಗದಲ್ಲಿ ಒಟ್ಟು 409 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ. ಟೆಕ್ನಿಷಿಯನ್, ಟ್ರೇಡ್ ಮತ್ತು ಪದವೀಧರ ಅಪ್ರೆಂಟಿಸ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಹುದ್ದೆಗಳು ಲಭ್ಯವಿದ್ದು, 10ನೇ ತರಗತಿ, ಐಟಿಐ, ಡಿಪ್ಲೊಮಾ, ಪಿಯುಸಿ ಹಾಗೂ ಪದವೀಧರ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಇನ್ಸ್ಟ್ರುಮೆಂಟೇಶನ್, ಸಿವಿಲ್ ಸೇರಿದಂತೆ ಸಂಬಂಧಿತ ಎಂಜಿನಿಯರಿಂಗ್ ವಿಭಾಗಗಳಲ್ಲಿ ಮೂರು ವರ್ಷಗಳ ಡಿಪ್ಲೊಮಾ ಪೂರ್ಣಗೊಳಿಸಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಕನಿಷ್ಠ ಶೇ.50 ಹಾಗೂ ಎಸ್ಸಿ, ಎಸ್ಟಿ ಮತ್ತು ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳು ಶೇ.45 ಅಂಕಗಳನ್ನು ಪಡೆದಿರಬೇಕು. ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ 10ನೇ ತರಗತಿ ಉತ್ತೀರ್ಣರಾಗಿರುವುದರ ಜೊತೆಗೆ ಫಿಟ್ಟರ್, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಇನ್ಸ್ಟ್ರುಮೆಂಟ್ ಮೆಕ್ಯಾನಿಕ್ ಅಥವಾ ಮೆಷಿನಿಸ್ಟ್ ವಿಭಾಗದಲ್ಲಿ ಎನ್ಸಿವಿಟಿ ಅಥವಾ ಎಸ್ಸಿವಿಟಿ ಮಾನ್ಯತೆ ಪಡೆದ ಎರಡು ವರ್ಷಗಳ ಐಟಿಐ ಪ್ರಮಾಣಪತ್ರ ಹೊಂದಿರಬೇಕು. ಪದವೀಧರ ಅಪ್ರೆಂಟಿಸ್ ಹುದ್ದೆಗಳಿಗೆ ಬಿಎ, ಬಿಕಾಂ, ಬಿಎಸ್ಸಿ ಅಥವಾ ಬಿಬಿಎ ಪದವಿಯಲ್ಲಿ ಕನಿಷ್ಠ ಶೇ.50 ಅಂಕಗಳು ಹಾಗೂ ಮೀಸಲು ವರ್ಗದ ಅಭ್ಯರ್ಥಿಗಳಿಗೆ ಶೇ.45 ಅಂಕಗಳು ಕಡ್ಡಾಯವಾಗಿದೆ. ಬಿಇ, ಬಿಟೆಕ್, ಎಂಬಿಎ, ಎಂಸಿಎ, ಸಿಎ ಮತ್ತು ಎಲ್ಎಲ್ಬಿ ಪದವೀಧರರು ಈ ಹುದ್ದೆಗಳಿಗೆ ಅರ್ಹರಾಗಿರುವುದಿಲ್ಲ. ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಫ್ರೆಶರ್ ಅಭ್ಯರ್ಥಿಗಳು ಪಿಯುಸಿ ಅಥವಾ 12ನೇ ತರಗತಿ ಉತ್ತೀರ್ಣರಾಗಿರಬೇಕು. ಟೆಕ್ನಿಷಿಯನ್ ಮತ್ತು ಪದವೀಧರ ಅಪ್ರೆಂಟಿಸ್ ಹುದ್ದೆಗಳಿಗೆ ಏಪ್ರಿಲ್ 1, 2023ರಿಂದ ನವೆಂಬರ್ 30, 2026ರ ನಡುವೆ ವಿದ್ಯಾರ್ಹತೆ ಪೂರ್ಣಗೊಳಿಸಿರಬೇಕು. ಐಟಿಐ ಮತ್ತು ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಏಪ್ರಿಲ್ 1, 2022ರಿಂದ ನವೆಂಬರ್ 30, 2026ರ ನಡುವೆ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 24 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ, ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಹತ್ತು ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಈ ನೇಮಕಾತಿಯ ವಿಶೇಷವೆಂದರೆ ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ. ಅಭ್ಯರ್ಥಿಗಳ ಶೈಕ್ಷಣಿಕ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ಸಿದ್ಧಪಡಿಸಿ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ 12 ತಿಂಗಳ ಅಪ್ರೆಂಟಿಸ್ಶಿಪ್ ತರಬೇತಿ ನೀಡಲಾಗುತ್ತದೆ. ಈ ಅವಧಿಯಲ್ಲಿ ನಿಯಮಾನುಸಾರ ಮಾಸಿಕ ಸ್ಟೈಫಂಡ್ ಕೂಡ ಲಭ್ಯವಾಗಲಿದೆ. ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿಲ್ಲ. ಆಸಕ್ತ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಎನ್ಎಪಿಎಸ್ ಅಥವಾ ಎನ್ಎಟಿಎಸ್ ಅಧಿಕೃತ ಪೋರ್ಟಲ್ನಲ್ಲಿ ನೋಂದಾಯಿಸಿಕೊಂಡು ಅರ್ಜಿ ಸಲ್ಲಿಸಬೇಕು. ಇದರ ಜೊತೆಗೆ ನೇಮಕಾತಿ ಅಧಿಸೂಚನೆಯಲ್ಲಿ ನೀಡಿರುವ ಮೈಕ್ರೋಸಾಫ್ಟ್ ಫಾರ್ಮ್ ಅನ್ನೂ ಕಡ್ಡಾಯವಾಗಿ ಭರ್ತಿ ಮಾಡಬೇಕು. ಆನ್ಲೈನ್ ಅರ್ಜಿ ಸಲ್ಲಿಸಲು ಡಿಸೆಂಬರ್ 12ರ ಸಂಜೆ 5 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ.







