ಕಾರ್ಕಳ: ಪಡುತಿರುಪತಿ ಖ್ಯಾತಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶತಮಾನಗಳ ಇತಿಹಾಸ ಹೊಂದಿರುವ ವಿಶ್ವರೂಪ ದರ್ಶನ ಹಾಗೂ ದೀಪಾಲಂಕಾರ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು. ದೇವಸ್ಥಾನದ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಸಾವಿರಾರು ಹಣತೆಗಳನ್ನು ಬೆಳಗಿಸುವ ಮೂಲಕ ಇಡೀ ಕ್ಷೇತ್ರವನ್ನು ದೀಪಗಳ ಬೆಳಕಿನಲ್ಲಿ ಕಂಗೊಳಿಸುವಂತೆ ಮಾಡಲಾಯಿತು. ಮುಂಜಾನೆ 3 ಗಂಟೆಯಿಂದಲೇ ಹಣತೆಗಳನ್ನು ಬೆಳಗಿಸುವ ಕಾರ್ಯ ಆರಂಭಗೊಂಡಿದ್ದು, ಸುಮಾರು 25 ಸಾವಿರಕ್ಕೂ ಅಧಿಕ ಹಣತೆಗಳ ದೀಪಾಲಂಕಾರ ಭಕ್ತರ ಕಣ್ಮನ ಸೆಳೆಯಿತು. ವಿಶ್ವರೂಪ ದರ್ಶನ ಪಡೆಯಲು ಊರ ಹಾಗೂ ಪರವೂರಿನಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಶ್ರೀ ದೇವರ ದರ್ಶನ ಪಡೆದರು. ದೇವಸ್ಥಾನದ ಸುತ್ತಮುತ್ತ ಮಕ್ಕಳು ವಿವಿಧ ಬಗೆಯ ಆಕರ್ಷಕ ರಂಗೋಲಿಗಳನ್ನು ಬಿಡಿಸಿ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಜಿಎಸ್ಬಿ ಬಾಂಧವರು ಹಾಗೂ ಶ್ರೀ ವೆಂಕಟರಮಣ ದೇವಸ್ಥಾನದ ಸ್ವಯಂಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡರು. ದೀಪಗಳ ಬೆಳಕು, ಭಕ್ತರ ಭಜನೆ ಹಾಗೂ ಧಾರ್ಮಿಕ ವಾತಾವರಣದೊಂದಿಗೆ ಪಡುತಿರುಪತಿ ಕ್ಷೇತ್ರದಲ್ಲಿ ಭಕ್ತಿಯ ಸಂಭ್ರಮ ಮನೆಮಾಡಿತ್ತು.
