
ಚಿಕ್ಕಮಗಳೂರು: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಮಾರಾಟದ ಸಂದರ್ಭದಲ್ಲಿ ಸಂಭವಿಸಬಹುದಾದ ಬೆಂಕಿ ಅವಘಡಗಳನ್ನು ತಡೆಯುವ ಉದ್ದೇಶದಿಂದ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವತಿಯಿಂದ ಪಟಾಕಿ ಅಂಗಡಿ ಮಾಲೀಕರು ಹಾಗೂ ಮಾರಾಟಗಾರರೊಂದಿಗೆ ಮಹತ್ವದ ಸಭೆ ನಡೆಸಿ ಕಟ್ಟುನಿಟ್ಟಿನ ಸುರಕ್ಷತಾ ಸೂಚನೆಗಳನ್ನು ನೀಡಲಾಯಿತು. ಅಕ್ಟೋಬರ್ 30ರಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಹಯೋಗದಲ್ಲಿ ನಡೆದ ಸಭೆಯಲ್ಲಿ ಪಟಾಕಿ ಮಾರಾಟಗಾರರು ಕಡ್ಡಾಯವಾಗಿ ಪಾಲಿಸಬೇಕಾದ ನಿಯಮಗಳು ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತು ವಿವರವಾಗಿ ತಿಳಿಸಲಾಯಿತು.
ಪ್ರಮುಖ ಸೂಚನೆಗಳು ಹೀಗಿವೆ:
1. ಹಸಿರು ಪಟಾಕಿಗಳಿಗೆ ಮಾತ್ರ ಅವಕಾಶ: ಸರ್ವೋಚ್ಚ ನ್ಯಾಯಾಲಯದ ನಿರ್ದೇಶನ ಹಾಗೂ ಸರ್ಕಾರದ ಮಾರ್ಗಸೂಚಿಗಳಂತೆ ಅಧಿಕೃತವಾಗಿ ಅನುಮೋದನೆ ಪಡೆದ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು.
2. ಅಧಿಕೃತ ಮಾರಾಟಗಾರರಿಂದ ಖರೀದಿ: ಸಂಬಂಧಪಟ್ಟ ಪ್ರಾಧಿಕಾರದಿಂದ ಪರವಾನಗಿ ಪಡೆದ ಉತ್ಪಾದಕರು ಅಥವಾ ಮಾರಾಟಗಾರರಿಂದ ಮಾತ್ರ ಪಟಾಕಿಗಳನ್ನು ಖರೀದಿಸಬೇಕು. ಪಟಾಕಿ ಬಾಕ್ಸ್ಗಳ ಮೇಲೆ ಕಡ್ಡಾಯವಾಗಿ ಬಾರ್ಕೋಡ್ ಲೋಗೋ ಇರಬೇಕು.
3. ಪರವಾನಗಿ ನಿಯಮ ಕಡ್ಡಾಯ: ಜಿಲ್ಲಾಧಿಕಾರಿಗಳ ಪರವಾನಗಿಯಲ್ಲಿ ಸೂಚಿಸಿರುವ ದಿನಾಂಕ, ಸ್ಥಳ ಮತ್ತು ಷರತ್ತುಗಳ ಅನ್ವಯ ಮಾತ್ರ ತಾತ್ಕಾಲಿಕ ಪಟಾಕಿ ಮಳಿಗೆಗಳನ್ನು ತೆರೆಯಬೇಕು. ಪರವಾನಗಿ ಪ್ರತಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು.
4. ಸುರಕ್ಷಿತ ಮಳಿಗೆ ನಿರ್ಮಾಣ: ಒಂದು ಮಳಿಗೆಯಿಂದ ಮತ್ತೊಂದು ಮಳಿಗೆಗೆ ಕನಿಷ್ಠ ಮೂರು ಮೀಟರ್ ಅಂತರ ಇರಬೇಕು. ಮಳಿಗೆಗಳಲ್ಲಿ ಗಾಳಿ ಸರಾಗವಾಗಿ ಸಂಚರಿಸುವ ವ್ಯವಸ್ಥೆ ಇರಬೇಕು ಹಾಗೂ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳದ ಫೈರ್ ರಿಟಾರ್ಡಂಟ್ ಸಾಮಗ್ರಿಗಳನ್ನು ಬಳಸಬೇಕು.
5. ಅಗ್ನಿ ಸುರಕ್ಷತಾ ಕ್ರಮ: ಪ್ರತಿಯೊಂದು ಮಳಿಗೆಯಲ್ಲಿ ಒಂಬತ್ತು ಲೀಟರ್ ಸಾಮರ್ಥ್ಯದ ವಾಟರ್ ಪ್ರೆಶರ್ ಮಾದರಿಯ ಅಗ್ನಿ ನಂದಕ ಹಾಗೂ ನೀರಿನ ಬಕೆಟ್ಗಳನ್ನು ಇರಿಸಬೇಕು. ಮಳಿಗೆಗಳ ಸಮೀಪ ಅಗತ್ಯ ಪ್ರಮಾಣದ ನೀರನ್ನು ಸಂಗ್ರಹಿಸಿಟ್ಟಿರಬೇಕು.
6. ಧೂಮಪಾನ ಮತ್ತು ಅಡುಗೆ ನಿಷೇಧ: ಪಟಾಕಿ ಮಳಿಗೆಗಳಲ್ಲಿ ಅಡುಗೆ ಮಾಡುವುದಕ್ಕೂ ಹಾಗೂ ಧೂಮಪಾನಕ್ಕೂ ಅವಕಾಶ ಇರುವುದಿಲ್ಲ. ರಾತ್ರಿ ವೇಳೆಯಲ್ಲಿ ಮಳಿಗೆಗಳಲ್ಲಿ ಯಾರೂ ಮಲಗಬಾರದು.
7. ಜನದಟ್ಟಣೆ ನಿಯಂತ್ರಣ: ಪಟಾಕಿ ಖರೀದಿಸುವ ಸಂದರ್ಭದಲ್ಲಿ ಜನದಟ್ಟಣೆ ಆಗದಂತೆ ನೋಡಿಕೊಳ್ಳಬೇಕು ಹಾಗೂ ಸಾರ್ವಜನಿಕರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಬೇಕು.
8. ಸುರಕ್ಷಿತ ಸ್ಥಳದಲ್ಲೇ ಮಳಿಗೆ: ಸಾರ್ವಜನಿಕ ವಸತಿ ಪ್ರದೇಶಗಳಿಂದ ದೂರವಿರುವ ಬಯಲು ಪ್ರದೇಶಗಳಲ್ಲಿ ಅಗತ್ಯ ಅನುಮತಿ ಪಡೆದು ಮಳಿಗೆಗಳನ್ನು ಸ್ಥಾಪಿಸಬೇಕು. ಬಸ್ ನಿಲ್ದಾಣ, ಪೆಟ್ರೋಲ್ ಬಂಕ್, ವಿದ್ಯುತ್ ಟ್ರಾನ್ಸ್ಫಾರ್ಮರ್ ಹಾಗೂ ಹೆಚ್ಚಿನ ಜನಸಂದಣಿ ಇರುವ ಪ್ರದೇಶಗಳ ಸಮೀಪ ಮಳಿಗೆಗಳನ್ನು ತೆರೆಯುವಂತಿಲ್ಲ.
9. ರಸ್ತೆ ಸುರಕ್ಷತೆ: ಪಟಾಕಿ ಅಂಗಡಿಗಳನ್ನು ರಸ್ತೆಯಿಂದ ಕನಿಷ್ಠ 50 ಮೀಟರ್ ದೂರದಲ್ಲಿ ಸ್ಥಾಪಿಸುವಂತೆ ಸೂಚಿಸಲಾಗಿದೆ.
10. ವಿದ್ಯುತ್ ಸುರಕ್ಷತೆ: ಪಟಾಕಿ ಮಳಿಗೆಗಳಲ್ಲಿ ಹಾನಿಗೊಳಗಾಗದ ವಿದ್ಯುತ್ ವೈರ್ಗಳನ್ನು ಮಾತ್ರ ಬಳಸಬೇಕು. ವಿದ್ಯುತ್ ವ್ಯತ್ಯಯ ಉಂಟಾದ ಸಂದರ್ಭದಲ್ಲಿ ಬೆಂಕಿಕಡ್ಡಿ ಅಥವಾ ಇತರ ಬೆಂಕಿಯ ಮೂಲಗಳನ್ನು ಬಳಸದೆ ಚಾರ್ಜ್ ಮಾಡಿದ ಎಮರ್ಜೆನ್ಸಿ ಲೈಟ್ ಬಳಸಬೇಕು.
11. ಸುಡುವ ವಸ್ತುಗಳಿಗೆ ನಿರ್ಬಂಧ: ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗ್ನಿ ಪ್ರಚೋದಕ ವಸ್ತುಗಳನ್ನು ಪಟಾಕಿ ಮಳಿಗೆಗಳ ಬಳಿ ಇರಿಸಬಾರದು.
12. ವಿದೇಶಿ ಪಟಾಕಿ ನಿಷೇಧ: ವಿದೇಶಿ ಪಟಾಕಿಗಳ ಸಾಗಾಟ ಮತ್ತು ಮಾರಾಟಕ್ಕೆ ಅವಕಾಶ ಇರುವುದಿಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
13. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ: ರಾಷ್ಟ್ರೀಯ ಹಾಗೂ ರಾಜ್ಯ ಸರ್ಕಾರದ ನಿರ್ದೇಶನಗಳನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಅಧಿನಿಯಮ 2005 ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್ಗಳಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಇದೇ ವೇಳೆ 20ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪಟಾಕಿ ಅಂಗಡಿಗಳನ್ನು ಸ್ಥಾಪಿಸುವ ಸಂದರ್ಭದಲ್ಲಿ ಅಗ್ನಿಶಾಮಕ ಇಲಾಖೆಯ ಅಗ್ನಿ ನಂದಕ ವಾಹನವನ್ನು ಸಮೀಪದಲ್ಲೇ ನಿಯೋಜಿಸುವಂತೆ ಸೂಚಿಸಲಾಗಿದೆ. ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿಟಿ ಜಯಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ನಂಜುಂಡೇಗೌಡ, ಅಗ್ನಿಶಾಮಕ ಅಧಿಕಾರಿ ಪ್ರವೀಣ್ ಕೆ.ಎನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಪಟಾಕಿ ಅಂಗಡಿ ಮಾಲೀಕರು ಮತ್ತು ಮಾರಾಟಗಾರರು ಉಪಸ್ಥಿತರಿದ್ದರು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕರು ಎಲ್ಲಾ ಸುರಕ್ಷತಾ ನಿಯಮಗಳು ಮತ್ತು ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸಹಕರಿಸುವಂತೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಮನವಿ ಮಾಡಿದೆ.





