
ಮೂಡಿಗೆರೆ: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿರುವ ಹೇಳಿಕೆಯನ್ನು ಬಿಜೆಪಿ ಮುಖಂಡ ಪ್ರಸನ್ನ ಕೃಷ್ಣಪ್ಪ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದೇಶದ ಪ್ರಧಾನಮಂತ್ರಿಯವರ ಬಗ್ಗೆ ಮಾತನಾಡುವಾಗ ರಾಜಕೀಯ ನಾಯಕರು ತಮ್ಮ ಘನತೆ ಹಾಗೂ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೆ ಸೈದ್ಧಾಂತಿಕವಾಗಿ ಟೀಕಿಸಬಹುದೇ ಹೊರತು, ವೈಯಕ್ತಿಕ ಟೀಕೆಗಳ ಮೂಲಕ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿ, ಜನಕಲ್ಯಾಣ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರಧಾನಿಯವರ ವಿರುದ್ಧ ಆಧಾರರಹಿತ ಟೀಕೆಗಳನ್ನು ಮಾಡುವ ಬದಲು, ದೇಶದ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳ ಕುರಿತು ರಚನಾತ್ಮಕ ಚರ್ಚೆ ನಡೆಸುವುದು ವಿರೋಧ ಪಕ್ಷಗಳ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್ನ ಹಿರಿಯ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಮಾತುಗಳಲ್ಲಿ ಸಂಯಮ ಕಾಪಾಡಿಕೊಳ್ಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆರೋಗ್ಯಕರ ಟೀಕೆಗಳಿಗೆ ಅವಕಾಶವಿದ್ದರೂ, ರಾಜಕೀಯ ನಾಯಕರು ಪರಸ್ಪರ ಗೌರವದಿಂದ ನಡೆದುಕೊಳ್ಳುವುದು ಅತ್ಯಗತ್ಯ. ಕಾಂಗ್ರೆಸ್ ನಾಯಕರು ಈ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಬಿಜೆಪಿ ಮುಖಂಡ ಪ್ರಸನ್ನ ಕೃಷ್ಣಪ್ಪ ಆಗ್ರಹಿಸಿದ್ದಾರೆ.




