
ಚಿಕ್ಕಮಗಳೂರು: ಶಿಕಾರಿಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಗುಂಡು ತಗುಲಿ 26 ವರ್ಷದ ಯುವಕ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ನಡೆದಿದೆ. ಮೃತರನ್ನು ಕೊಪ್ಪ ತಾಲೂಕಿನ ಕಡೇಮನೆ ಗ್ರಾಮದ ನಿವಾಸಿ ಚೇತನ್ ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ ಚೇತನ್ ಸೇರಿದಂತೆ ಏಳು ಮಂದಿ ಸ್ನೇಹಿತರು ಶಿಕಾರಿಗೆ ತೆರಳಿದ್ದರು ಎನ್ನಲಾಗಿದ್ದು, ಕತ್ತಲಿನಲ್ಲಿ ಶಿಕಾರಿ ನಡೆಸುತ್ತಿದ್ದ ವೇಳೆ ಆಕಸ್ಮಿಕವಾಗಿ ಗುಂಡು ತಗುಲಿ ಚೇತನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಜೊತೆಗಿದ್ದ ಸ್ನೇಹಿತರು ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆಯೇ ಚೇತನ್ ಮೃತಪಟ್ಟಿದ್ದಾರೆ. ಘಟನೆ ಬಳಿಕ ಆಸ್ಪತ್ರೆಗೆ ಚೇತನ್ ಅವರನ್ನು ಕರೆತಂದ ಮೂವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಶಿಕಾರಿಗೆ ತೆರಳಿದ್ದ ಏಳು ಮಂದಿಯಲ್ಲಿ ಮೂವರು ನಾಪತ್ತೆಯಾಗಿದ್ದು, ಘಟನೆ ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




