
ಕೊಟ್ಟಿಗೆಹಾರ: ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರದ ಜತೆಗೆ ದಾನಿಗಳ ಸಹಕಾರವೂ ಅಗತ್ಯವಾಗಿದ್ದು, ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುವುದರ ಮೂಲಕ ಸಮಾಜದ ಭವಿಷ್ಯಕ್ಕೆ ಹೂಡಿಕೆ ಮಾಡಿದಂತಾಗುತ್ತದೆ ಎಂದು ಸರಕಾರಿ ಹಿರಿಯ ಪ್ರಾಥಮಿಕ ಬಾಲಿಕಾ ಶಾಲೆಯ ಮುಖ್ಯ ಶಿಕ್ಷಕಿ ಯಾಸ್ಮೀನ್ ಹೇಳಿದರು. ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಬಾಲಿಕಾ ಶಾಲೆಯಲ್ಲಿ ಸಮಾಜ ಸೇವಕರ ವತಿಯಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಡ ಹಾಗೂ ಸರಕಾರಿ ಶಾಲೆಯ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ದಾನಿಗಳ ಸೇವೆ ಶ್ಲಾಘನೀಯ. ಇಂತಹ ಸಹಕಾರದಿಂದ ಶಾಲೆಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ, ಅಭಿವೃದ್ಧಿಗೆ ಮತ್ತಷ್ಟು ಉತ್ತೇಜನ ನೀಡಲು ಸಾಧ್ಯವಾಗುತ್ತದೆ ಎಂದರು. ಸಮಾಜ ಸೇವಕ ಪಿ.ಕೆ. ರಾಜು ಮಾತನಾಡಿ, ಖಾಸಗಿ ಶಾಲೆಗಳತ್ತ ಪೋಷಕರ ಒಲವು ಹೆಚ್ಚುತ್ತಿರುವುದರಿಂದ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಸರಕಾರಿ ಶಾಲೆಗಳಲ್ಲಿ ಕಲಿಯುವ ಬಹುತೇಕ ಮಕ್ಕಳು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಸೇರಿದವರಾಗಿದ್ದು, ಅವರಿಗೆ ಮೂಲಭೂತ ಸೌಲಭ್ಯಗಳ ಕೊರತೆಯಾಗದಂತೆ ಸಂಘ ಸಂಸ್ಥೆಗಳು ಹಾಗೂ ದಾನಿಗಳು ಕೈಜೋಡಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷೆ ನಮೀರಾಬಾನು, ಪತ್ರಕರ್ತರ ಸಂಘದ ಅಧ್ಯಕ್ಷ ಸಂತೋಷ್ ಅತ್ತಿಗೆರೆ, ಹಂತೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಯು.ಪಿ. ಜಗದೀಶ್, ಸಂಜಯ್ ಕೊಟ್ಟಿಗೆಹಾರ, ರಾಘವೇಂದ್ರ ಬಣಕಲ್, ಪ್ರವೀಣ್ ಪೂಜಾರಿ, ಪ್ರವೀಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.




