
ಮೂಡಿಗೆರೆ: ಕ್ರೀಡೆಗೆ ಪ್ರೋತ್ಸಾಹ ನೀಡುತ್ತೇವೆ ಎಂದು ಕ್ರೀಡಾ ಇಲಾಖೆ ಹೇಳುತ್ತಿದ್ದರೂ, ಕ್ರೀಡಾಪಟುಗಳಿಗೆ ಅಗತ್ಯವಿರುವ ಕ್ರೀಡಾಂಗಣದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯ ತೋರುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಮೂಡಿಗೆರೆಯ ಹೊಯ್ಸಳ ಕ್ರೀಡಾಂಗಣದಲ್ಲಿ ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿ ಸ್ಥಳ ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ಕೊರತೆಯಿಂದ ಕ್ರೀಡಾಪಟುಗಳು, ಕರ್ತವ್ಯ ನಿರ್ವಹಿಸುವ ಶಿಕ್ಷಕರು ಹಾಗೂ ಕ್ರೀಡಾಕೂಟ ವೀಕ್ಷಿಸಲು ಆಗಮಿಸುವ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ರಾಜಕೀಯ ನಾಯಕರ ಬೃಹತ್ ಸಮಾವೇಶಗಳು, ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವದಂತಹ ಕಾರ್ಯಕ್ರಮಗಳ ಸಂದರ್ಭದಲ್ಲಿ ಮಾತ್ರ ಕ್ರೀಡಾಂಗಣವನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗುತ್ತಿದ್ದು, ಮಣ್ಣು ಸುರಿದು ಮೈದಾನವನ್ನು ಸಮತಟ್ಟುಗೊಳಿಸಲಾಗುತ್ತದೆ. ಆದರೆ ಕಾರ್ಯಕ್ರಮಗಳು ಮುಗಿದ ಬಳಿಕ ಕ್ರೀಡಾಂಗಣ ಮತ್ತೆ ಯಥಾಸ್ಥಿತಿಗೆ ಮರಳುತ್ತದೆ ಎನ್ನಲಾಗಿದೆ. ಇದರಿಂದ ಕ್ರೀಡಾಭ್ಯಾಸಕ್ಕೆ ಆಗಮಿಸುವ ಆಟಗಾರರು ಸಮಸ್ಯೆ ಎದುರಿಸುವಂತಾಗಿದೆ. ಜಿಲ್ಲೆಯಲ್ಲಿ ಹಲವು ಪ್ರತಿಭಾವಂತ ಕ್ರೀಡಾಪಟುಗಳನ್ನು ಹೊಂದಿದ್ದ ಮೂಡಿಗೆರೆ ತಾಲೂಕಿನಲ್ಲಿ ಸೂಕ್ತ ಸೌಲಭ್ಯಗಳ ಕೊರತೆಯಿಂದ ಕ್ರೀಡಾ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಕ್ರೀಡಾಪಟುಗಳ ಆರೋಗ್ಯ, ಸುರಕ್ಷತೆ ಹಾಗೂ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಹೊಯ್ಸಳ ಕ್ರೀಡಾಂಗಣದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಶೀಘ್ರವಾಗಿ ಕಲ್ಪಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸಾಜೀದ್ ಬಣಕಲ್ ಒತ್ತಾಯಿಸಿದ್ದಾರೆ.





