
ಚಿಕ್ಕಮಗಳೂರು: ಮಲೆನಾಡಿಗೆ ಮುಖ್ಯಮಂತ್ರಿ ಭೇಟಿ ನೀಡಿದ ಬೆನ್ನಲ್ಲೇ ಕಸ್ತೂರಿ ರಂಗನ್ ವರದಿ ವಿರೋಧಿಸಿ ಸೆಪ್ಟೆಂಬರ್ 21ರಂದು ಶೃಂಗೇರಿ ತಾಲೂಕು ಬಂದ್ ಹಾಗೂ ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದೆ. ಶೃಂಗೇರಿ ರೈತ ಒಕ್ಕೂಟ, ಮಲೆನಾಡು ನಾಗರಿಕ ಹಿತರಕ್ಷಣಾ ಸಮಿತಿ, ವಿವಿಧ ರಾಜಕೀಯ ಪಕ್ಷಗಳು ಹಾಗೂ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಬಂದ್ ನಡೆಯಲಿದ್ದು, ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ತಾಲೂಕು ಬಂದ್ ನಡೆಸಲು ನಿರ್ಧರಿಸಲಾಗಿದೆ. ಬಂದ್ಗೆ ಬೆಂಬಲವಾಗಿ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚುವಂತೆ ಕರೆ ನೀಡಲಾಗಿದೆ. ಬೆಳಗ್ಗೆ 10 ಗಂಟೆಗೆ ಶೃಂಗೇರಿ ಸ್ವಾಗತ ದ್ವಾರದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಲಿದ್ದು, ಬಳಿಕ ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ. ಕಸ್ತೂರಿ ರಂಗನ್ ವರದಿ ಜಾರಿಯಾದರೆ ಮಲೆನಾಡಿನ ಹಲವು ಗ್ರಾಮಗಳು ಪರಿಸರ ಸೂಕ್ಷ್ಮ ವಲಯ ಹಾಗೂ ಬಫರ್ ಜೋನ್ ವ್ಯಾಪ್ತಿಗೆ ಒಳಪಡುವ ಆತಂಕವಿದ್ದು, ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ತೊಂದರೆಯಾಗಬಹುದು ಎಂದು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಕೃಷಿ, ಸಾಗುವಳಿ ಭೂಮಿ, ಮನೆ ನಿರ್ಮಾಣ, ಮರಳು ಗಣಿಗಾರಿಕೆ, ಕ್ರಷರ್ ಹಾಗೂ ಕಾಫಿ ಪಲ್ಪಿಂಗ್ ಸೇರಿದಂತೆ ಹಲವು ಚಟುವಟಿಕೆಗಳ ಮೇಲೂ ನಿರ್ಬಂಧದ ಆತಂಕ ವ್ಯಕ್ತಪಡಿಸಿರುವ ಹೋರಾಟಗಾರರು, ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 137ಕ್ಕೂ ಹೆಚ್ಚು ಗ್ರಾಮಗಳು ವರದಿಯ ವ್ಯಾಪ್ತಿಯಿಂದ ಪರಿಣಾಮ ಎದುರಿಸಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಕಳೆದೊಂದು ತಿಂಗಳಿಂದ ಮಲೆನಾಡಿನ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಮಲೆನಾಡಿನಲ್ಲಿ ಬದುಕು ಕಟ್ಟಿಕೊಂಡಿರುವ ನಮ್ಮ ಭೂಮಿಯನ್ನು ಯಾವ ಸರ್ಕಾರವು ಮುಟ್ಟಬಾರದು 2026ರಲ್ಲಿ ಕೇಂದ್ರ ಸರ್ಕಾರ ಕೈಗಾರಿಕೆ ಅಭಿವೃದ್ಧಿಯ ಹೆಸರಿನಲ್ಲಿ ದೇಶದ ಎಲ್ಲಾ ಕಡೆ 28 ಲಕ್ಷ ಮರಗಳನ್ನು ಕಡಿಯಲು ಅನುಮತಿ ನೀಡಿದ್ದು ಆ ಮರಗಳನ್ನು ಕಡೆಯುವಾಗ ಇಲ್ಲದ ಪರಿಸರ ಪ್ರೀತಿ ಜನರು ಪರಿಸರವನ್ನು ಉಳಿಸಿಕೊಂಡು ಬರುವ ಮಲೆನಾಡಿನಲ್ಲಿ ಪರಿಸರದ ಬಗ್ಗೆ ಕಾಳಜಿ ಏಕೆ ? ಆದ್ದರಿಂದ ಇದನ್ನು ಬಂದು ಮತ್ತು ಪ್ರತಿಭಟನೆ ಮೂಲಕ ವಿರೋಧಿಸಿ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳುವಂತೆ ಮಾಡಬೇಕು ಎಂದು ಸಮಿತಿಯ ಕೊಡತಲು ಕೆಎಂ ರಮೇಶ ಭಟ್ ತಿಳಿಸಿದ್ದು, ಪ್ರತಿಭಟನೆಗೆ ಈ ಮೂಲಕ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಸಂಘಟನೆಗಳು ಮುಂದಾಗಿವೆ. ಸಭೆಯಲ್ಲಿ ಸಮಿತಿಯ ಗುಂಡಪ್ಪ ಕೆಲವಳ್ಳಿ, ಅಂಗುರ್ಡಿ ದಿನೇಶ್, ಡಿ.ಸಿ. ಶಂಕರಪ್ಪ ಹೆಚ್ಚೇ ನರೇಂದ್ರ, ಪ್ರಸನ್ನ ಬೇಗಾನೆ, ಬಿ.ಎಸ್. ಶ್ರೀಧರ್ ರಾವ್, ಕಚ್ಚೋಡಿ ಕೆ. ಎಸ್ ರಮೇಶ್, ಭರತ್ ಗಿಣಿಕಲ್, ಸಂತೋಷ್ ಕಾಳ್ಯ, ಪೂರ್ಣೇಶ್, ಚನ್ನಕೇಶವ, ಚಂದ್ರಪ್ಪ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಬಂದ್ ಹಾಗೂ ಪ್ರತಿಭಟನೆಯಲ್ಲಿ ರೈತರು, ವರ್ತಕರು, ಕಾರ್ಮಿಕರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸುವಂತೆ ಹೋರಾಟ ಸಮಿತಿ ಮನವಿ ಮಾಡಿದೆ.





