
ಕಾರ್ಕಳ: ಭಾರತೀಯ ಜನತಾ ಪಾರ್ಟಿ ಕಾರ್ಕಳ ಮಂಡಲದ ವತಿಯಿಂದ ಹಮ್ಮಿಕೊಳ್ಳಲಾಗಿರುವ ‘ಸೇವಾ ಸಂಕಲ್ಪ ಅಭಿಯಾನ’ದ ಪೂರ್ವಭಾವಿ ಸಭೆ ನಿನ್ನೆ ವಿಕಾಸದಲ್ಲಿ ಮಂಡಲ ಅಧ್ಯಕ್ಷ ನವೀನ್ ನಾಯಕ್ ನಿಟ್ಟೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸೆಪ್ಟೆಂಬರ್ 17ರಿಂದ ಅಕ್ಟೋಬರ್ 17ರವರೆಗೆ ಒಂದು ತಿಂಗಳ ಕಾಲ ನಡೆಯಲಿರುವ ಅಭಿಯಾನದಲ್ಲಿ 13 ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಅಭಿಯಾನದ ಆರಂಭದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ ದೀಪ’ ಕಾರ್ಯಕ್ರಮ ಆಯೋಜಿಸಲಾಗಿದ್ದು, ಫಲಾನುಭವಿಗಳ ಮನೆಗಳಲ್ಲಿ ದೇವರ ಮುಂದೆ ದೀಪ ಬೆಳಗಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಯುಷ್ಯ, ಆರೋಗ್ಯ, ಶಕ್ತಿ ಹಾಗೂ ಜನಸೇವೆ ಮಾಡುವ ಭಾಗ್ಯ ದೊರೆಯಲಿ ಎಂದು ಪ್ರಾರ್ಥಿಸಿ ಜನರ ಆಶೀರ್ವಾದ ಪಡೆಯುವ ಸಂಕಲ್ಪ ಮಾಡಲು ಕಾರ್ಯಕರ್ತರಿಗೆ ತಿಳಿಸಲಾಯಿತು. 2001ರಿಂದ ಆರಂಭವಾದ ನರೇಂದ್ರ ಮೋದಿ ಅವರ ನಿಸ್ವಾರ್ಥ ಜನಸೇವೆಯ ಪಯಣಕ್ಕೆ 25 ವರ್ಷಗಳ ಸಂಭ್ರಮದ ಹಿನ್ನೆಲೆಯಲ್ಲಿ ಅವರ ಸಮರ್ಪಣಾ ಭಾವವನ್ನು ಗೌರವಿಸುವ ನಿಟ್ಟಿನಲ್ಲಿ ಅಭಿಯಾನವನ್ನು ಯಶಸ್ವಿಗೊಳಿಸಲು ಪ್ರತಿಯೊಬ್ಬ ಕಾರ್ಯಕರ್ತರೂ ಸಕ್ರಿಯವಾಗಿ ಭಾಗವಹಿಸುವಂತೆ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ ಸಭೆಗೆ ಮಾಹಿತಿ ನೀಡಿದರು. ಹಿರಿಯರಾದ ಜಯರಾಮ್ ಸಾಲ್ಯಾನ್, ಸೂರ್ಯಕಾಂತ್ ಶೆಟ್ಟಿ, ಅಂಥೋನಿ ಡಿಸೋಜ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಶೆಟ್ಟಿ ಹಾಗೂ ಸತೀಶ್ ಪೂಜಾರಿ ಉಪಸ್ಥಿತರಿದ್ದರು. ಮಂಡಲ ಕಾರ್ಯದರ್ಶಿ ಕರುಣಾಕರ್ ಕೋಟ್ಯಾನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ವರದಿ: ಅರುಣ್ ಭಟ್ ಕಾರ್ಕಳ




