
ಮೂಡಿಗೆರೆ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಮೂಡಿಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ವತಿಯಿಂದ ನಮೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ ತಿಳಿಸಿದ್ದಾರೆ. ಸೆಪ್ಟೆಂಬರ್ 17ರಂದು ಬೆಳಗ್ಗೆ 10 ಗಂಟೆಗೆ ಮೂಡಿಗೆರೆ ರೈತಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಫಾಯಿ ಕರ್ಮಚಾರಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಸನ್ಮಾನ, ಆಟೋ, ಟ್ಯಾಕ್ಸಿ ಮತ್ತು ಕ್ಯಾಬ್ ಚಾಲಕರಿಗೆ ಮೂರು ವರ್ಷಗಳ ಉಚಿತ ಚಾಲಕರಕ್ಷಾ ವಿಮಾ ಯೋಜನೆ ಹಾಗೂ ಮಂಗಳಮುಖಿಯರಿಗೆ ಗೌರವಾರ್ಪಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಹಾಗೂ ದೇಶದ ಪ್ರಧಾನಿಯಾಗಿ 25 ವರ್ಷಗಳ ಯಶಸ್ವಿ ಸಾರ್ವಜನಿಕ ಜೀವನ ಪೂರೈಸಿದ ಹಿನ್ನೆಲೆಯಲ್ಲಿ ಈ ನಮೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಮಾಜಕ್ಕಾಗಿ ನಿರಂತರವಾಗಿ ಸೇವೆ ಸಲ್ಲಿಸುವ ಸುಮಾರು 2 ಸಾವಿರ ಶ್ರಮಿಕರನ್ನು ಗೌರವಿಸುವ ಉದ್ದೇಶ ಹೊಂದಲಾಗಿದೆ ಎಂದು ಗಜೇಂದ್ರ ಕೊಟ್ಟಿಗೆಹಾರ ಹೇಳಿದರು. ಕಾರ್ಯಕ್ರಮದ ಆಯೋಜಕಿ ಬಿಜೆಪಿ ಮುಖಂಡೆ ಸುಷ್ಮಾ ವಿಭಾ ಮಾತನಾಡಿ, ನರೇಂದ್ರ ಮೋದಿ ಅವರ ಅಭಿಮಾನಿಯಾಗಿ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಸಮಾಜಕ್ಕೆ ಸೇವೆ ಸಲ್ಲಿಸುವ ಕಾರ್ಯಕ್ರಮ ರೂಪಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಅವಧೂತ ವಿನಯ್ ಗುರೂಜಿ, ಕೇಂದ್ರ ಸಫಾಯಿ ಕರ್ಮಚಾರಿ ನಿಗಮದ ಅಧ್ಯಕ್ಷ ಹರದೀಪ್ ಸಿಂಗ್ ಗಿಲ್, ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಮಾಜಿ ಸಚಿವ ಹಾಗೂ ಹಾಲಿ ಎಂಎಲ್ಸಿ ಸಿ.ಟಿ.ರವಿ, ಮಾಜಿ ಸಭಾಪತಿ ಎಂ.ಕೆ.ಪ್ರಾಣೇಶ್, ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ, ದೇವರಾಜ್ ಶೆಟ್ರು ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಇದೇ ವೇಳೆ ಪ್ರಕೋಷ್ಠಗಳ ಜಿಲ್ಲಾ ಪ್ರಮುಖ್ ಪಂಚಾಕ್ಷರಿ ಹಾಲೂರು ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎಂಬ ಆಶಯದೊಂದಿಗೆ ತಿಂಗಳ ಕಾಲ ಸೇವಾ ಸಂಕಲ್ಪ ಅಭಿಯಾನದಡಿ 14 ಪ್ರಮುಖ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ನಗರ ಹಾಗೂ ಗ್ರಾಮೀಣ ಭಾಗದ ಮನೆಮನೆಗೂ ಅಭಿಯಾನ ತಲುಪಿಸಲಾಗುವುದು ಎಂದು ಹೇಳಿದರು.
ವರದಿ: ಸಂತೋಷ್ ಅತ್ತಿಗೆರೆ




