
ಚಿಕ್ಕಮಗಳೂರು: ಈ ಬಾರಿ ಚಿಕ್ಕಮಗಳೂರು ನಗರದ ಹಿಂದೂ ಮಹಾ ಗಣಪತಿಯ ಗಣೇಶೋತ್ಸವ ಅದ್ದೂರಿಯಾಗಿ ನಡೆಯಲಿದ್ದು, ಹಬ್ಬದ ಆಚರಣೆಗೆ ಆಡಳಿತ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಹಿಂದೆಂದಿಗಿಂತಲೂ ವಿಜೃಂಭಣೆಯಿಂದ ಗಣೇಶ ಚತುರ್ಥಿ ಆಚರಿಸಲು ಸಿದ್ಧತೆ ನಡೆಸಿರುವ ಮಂಡಳಿ, ಗಣಪತಿಗೆ ಭಕ್ತರಿಂದ ವಿಶೇಷ ಕೊಡುಗೆಯನ್ನೂ ಸ್ವೀಕರಿಸಿದೆ. ಸುಮಾರು 12 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ 5 ಕೆಜಿ ಬೆಳ್ಳಿಯಿಂದ ಗಣಪತಿಗಾಗಿ 4 ಕೆಜಿ ತೂಕದ ಬೆಳ್ಳಿ ಕಿರೀಟ ಹಾಗೂ ಒಟ್ಟು 1 ಕೆಜಿ ತೂಕದ ಎರಡು ಬೆಳ್ಳಿ ಆಯುಧಗಳನ್ನು ತಯಾರಿಸಲಾಗಿದೆ. ಈ ಬೆಳ್ಳಿಯನ್ನು ಹಿಂದೂ ಮಹಾ ಗಣಪತಿ ಆಡಳಿತ ಮಂಡಳಿಯ ಕಾರ್ಯಕರ್ತರು ಶೃಂಗೇರಿಗೆ ಕೊಂಡೊಯ್ದು ವಿಶೇಷ ಪೂಜೆ ಸಲ್ಲಿಸಿ ತಂದಿದ್ದಾರೆ. ಬೆಳ್ಳಿ ಕಿರೀಟಕ್ಕೆ ಶೃಂಗೇರಿ ಶ್ರೀ ಶಾರದಾ ಪೀಠದ ಕಿರಿಯ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ತೀರ್ಥ ಮಹಾಸ್ವಾಮೀಜಿಗಳು ಪೂಜೆ ಸಲ್ಲಿಸಿ ಪುಷ್ಪಾರ್ಚನೆ ನೆರವೇರಿಸಿದ್ದಾರೆ. ಇದೇ ವೇಳೆ, ಹಿಂದೂ ಮಹಾ ಗಣಪತಿ ಆಡಳಿತ ಮಂಡಳಿ ವತಿಯಿಂದ ಶೃಂಗೇರಿ ಶ್ರೀಗಳಿಗೂ ಗಣೇಶೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಒಟ್ಟು 11 ದಿನಗಳ ಕಾಲ ನಡೆಯಲಿರುವ ಈ ಗಣೇಶೋತ್ಸವದಲ್ಲಿ ವಿಘ್ನನಿವಾರಕ ವಿಘ್ನೇಶ್ವರನು ಬೆಳ್ಳಿ ಕಿರೀಟ ಹಾಗೂ ಆಯುಧಗಳ ಅಲಂಕಾರದೊಂದಿಗೆ ಭಕ್ತರಿಗೆ ದರ್ಶನ ನೀಡಿ ಆಶೀರ್ವಾದ ನೀಡಲಿದ್ದಾನೆ. ಕಳೆದ 12 ವರ್ಷಗಳಿಂದ ಪ್ರತಿವರ್ಷವೂ ವಿಭಿನ್ನ ರೀತಿಯಲ್ಲಿ ಹಿಂದೂ ಮಹಾ ಗಣಪತಿ ಆಚರಣೆ ನಡೆಸಿಕೊಂಡು ಬರುತ್ತಿರುವ ಆಡಳಿತ ಮಂಡಳಿ, ಈ ಬಾರಿಯೂ ಮತ್ತಷ್ಟು ವಿಭಿನ್ನ ಹಾಗೂ ವಿಜೃಂಭಣೆಯ ಆಚರಣೆಗೆ ಮುಂದಾಗಿದೆ. ಹಬ್ಬದ ಆಚರಣೆಯ ಜೊತೆಗೆ ಹಿಂದೂ ಸಮಾಜ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕವಾಗಿ ಸಂಘಟಿತರಾಗಿ ಒಂದಾಗಬೇಕು ಎಂಬ ಸಂದೇಶವನ್ನೂ ಆಡಳಿತ ಮಂಡಳಿ




