
ತೀರ್ಥಹಳ್ಳಿ: ಮಲೆನಾಡು ಪ್ರದೇಶವು ತನ್ನ ಕೃಷಿ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಪದ್ಧತಿಗಳಿಗೆ ಹೆಸರುವಾಸಿಯಾಗಿದ್ದು, ಇಲ್ಲಿನ ಕೃಷಿಕರ ಜೀವನೋಪಾಯಕ್ಕೆ ಅಡಿಕೆ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕೃಷಿ ಕಾರ್ಮಿಕರ ಕೊರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ಅನಿವಾರ್ಯವಾಗುತ್ತಿದೆ. ಅಡಿಕೆ ಕೊಯ್ಯಲು ಹಗುರವಾದ ಫೈಬರ್ ಹಾಗೂ ಕಾರ್ಬನ್ ಡ್ಯೂಟಿ ರಾಡ್ಗಳು ಮತ್ತು ಸಿಪ್ಪೆ ಸುಲಿಯುವ ಯಂತ್ರಗಳು ಈಗಾಗಲೇ ಬಳಕೆಯಲ್ಲಿದ್ದು, ಕೃಷಿ ಚಟುವಟಿಕೆಗಳನ್ನು ಸುಲಭಗೊಳಿಸಿವೆ. ಆದರೆ, ಸುಲಿದ ಅಡಿಕೆಯನ್ನು ಬೇಯಿಸಿ, ಒಣಗಿಸಿದ ಬಳಿಕ ಹಸ, ಬೆಟ್ಟೆ, ರಾಶಿ ಇಡಿ ಮತ್ತು ಗೊರಬಲು ಎಂಬ ನಾಲ್ಕು ವಿಭಾಗಗಳಾಗಿ ಗುಣಮಟ್ಟಕ್ಕೆ ಅನುಗುಣವಾಗಿ ಕೈಯಿಂದ ವಿಂಗಡಿಸುವುದು ಶ್ರಮದಾಯಕ ಹಾಗೂ ಸಮಯ ತೆಗೆದುಕೊಳ್ಳುವ ಕೆಲಸವಾಗಿದೆ. ಈ ಸಮಸ್ಯೆಗೆ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತೀರ್ಥಹಳ್ಳಿಯ ಹಿರಿಯ ಪತ್ರಕರ್ತ ಪ್ರಸನ್ನ ಹೊಳ್ಳ ಹಾಗೂ ಸಂಸ್ಕೃತ ಪ್ರಾಧ್ಯಾಪಕಿ ಪ್ರಭಾ ಹೊಳ್ಳ ದಂಪತಿಯ ಪುತ್ರಿ, ತೀರ್ಥಹಳ್ಳಿಯ ಸೇವಾ ಭಾರತಿ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಅನರ್ಘ್ಯ ಪಿ. ಹೊಳ್ಳ ಅವರು ಎಐ ಆಧಾರಿತ ಅಡಿಕೆ ವಿಂಗಡಣಾ ಯಂತ್ರದ ಮಾದರಿಯನ್ನು ಅಭಿವೃದ್ಧಿಪಡಿಸಿ ಗಮನ ಸೆಳೆದಿದ್ದಾರೆ. ವಿಜ್ಞಾನ ಮಾದರಿಯಾಗಿ ರೂಪುಗೊಂಡಿರುವ ಈ ಯಂತ್ರವು ಕೃತಕ ಬುದ್ಧಿಮತ್ತೆ ಹಾಗೂ ಮೈಕ್ರೋಕಂಟ್ರೋಲರ್ ತಂತ್ರಜ್ಞಾನವನ್ನು ಸಂಯೋಜಿಸಿಕೊಂಡು ಕಾರ್ಯನಿರ್ವಹಿಸುತ್ತದೆ. ಮೇಲ್ಭಾಗದ ನಾಳದ ಮೂಲಕ ನಾಲ್ಕು ಬಗೆಯ ಒಣಗಿಸಿದ ಅಡಿಕೆಗಳನ್ನು ಹಾಕಿದಾಗ, ಕೆಳಭಾಗದಲ್ಲಿರುವ ಸ್ಟಾರ್ ವೀಲ್ ಮೆಕ್ಯಾನಿಸಂ ಅಡಿಕೆಗಳು ಒಂದಕ್ಕೊಂದು ಸಿಕ್ಕಿಹಾಕಿಕೊಳ್ಳದಂತೆ ಸಾಲಾಗಿ ಎಡಭಾಗದ ಕನ್ವೇಯರ್ ಬೆಲ್ಟ್ಗೆ ಸಾಗಿಸುತ್ತದೆ. ಕನ್ವೇಯರ್ ಬೆಲ್ಟ್ನಲ್ಲಿ ಅಡಿಕೆ ಮುಂದಕ್ಕೆ ಚಲಿಸುವಾಗ ಮಧ್ಯಭಾಗದಲ್ಲಿರುವ ಸ್ಮಾರ್ಟ್ಫೋನ್ ಕ್ಯಾಮೆರಾ ಅದರ ಚಿತ್ರವನ್ನು ಸೆರೆಹಿಡಿಯುತ್ತದೆ. ಸ್ಮಾರ್ಟ್ಫೋನ್ನಲ್ಲಿ ರೂಪುಗೊಳಿಸಲಾದ ವಿಶೇಷ ಆ್ಯಪ್ ಹಾಗೂ ಎಐ ಆಧಾರಿತ ಮೆಷಿನ್ ಲರ್ನಿಂಗ್ ಮಾದರಿ ಅಡಿಕೆಯ ಆಕಾರ ಮತ್ತು ವಿನ್ಯಾಸವನ್ನು ಕ್ಷಣಾರ್ಧದಲ್ಲಿ ವಿಶ್ಲೇಷಿಸಿ ಅದರ ವಿಧವನ್ನು ಗುರುತಿಸುತ್ತದೆ. ಬಳಿಕ ಆ್ಯಪ್ ಬ್ಲೂಟೂತ್ ಮೂಲಕ ಆರ್ಡಿನೋ ಮೈಕ್ರೋಕಂಟ್ರೋಲರ್ಗೆ ಡಿಜಿಟಲ್ ಸಿಗ್ನಲ್ ರವಾನಿಸುತ್ತದೆ. ಆರ್ಡಿನೋ ಮೈಕ್ರೋಕಂಟ್ರೋಲರ್ ಮೋಟಾರ್ಗಳನ್ನು ನಿಯಂತ್ರಿಸಿ, ಕನ್ವೇಯರ್ ಬೆಲ್ಟ್ನ ತುದಿಯಲ್ಲಿರುವ 360 ಡಿಗ್ರಿ ತಿರುಗುವ ರೋಬೋಟಿಕ್ ಮೋಟಾರ್ಗೆ ನಿರ್ದೇಶನ ನೀಡುತ್ತದೆ. ಮೋಟಾರ್ ಆಯಾ ಅಡಿಕೆಯ ವಿಧಕ್ಕೆ ನಿಗದಿಪಡಿಸಿದ ಬೌಲ್ನತ್ತ ತಿರುಗಿ, ಅಡಿಕೆ ಸರಿಯಾದ ಪಾತ್ರೆಯಲ್ಲಿ ಬೀಳುವಂತೆ ಮಾಡುತ್ತದೆ. ಸ್ಮಾರ್ಟ್ಫೋನ್ ಆ್ಯಪ್ ಮೂಲಕವೇ ಸಂಪೂರ್ಣ ಪ್ರಕ್ರಿಯೆಯನ್ನು ನಿಯಂತ್ರಿಸಲು ಸಾಧ್ಯವಾಗುವುದರಿಂದ ರೈತರಿಗೆ ಇದರ ಬಳಕೆ ಸರಳವಾಗುವ ಸಾಧ್ಯತೆಯಿದೆ. ಪ್ರಸ್ತುತ ಪ್ರದರ್ಶನಕ್ಕಾಗಿ ನಿರ್ಮಿಸಿರುವ ಸಣ್ಣ ಮಾದರಿಯಾಗಿದ್ದರೂ, ಇದರ ಮೂಲ ತತ್ವವನ್ನು ಕೃಷಿ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಬಳಸಬಹುದಾಗಿದೆ. ಭವಿಷ್ಯದಲ್ಲಿ ಇಂಡಸ್ಟ್ರಿಯಲ್ ವಿಷನ್ ಕ್ಯಾಮೆರಾ, ಹೈ-ಸ್ಪೀಡ್ ಪ್ರೊಸೆಸರ್ ಹಾಗೂ ಏರ್ ಬ್ಲೋಯರ್ ತಂತ್ರಜ್ಞಾನಗಳನ್ನು ಅಳವಡಿಸಿ ಬೃಹತ್ ಪ್ರಮಾಣದಲ್ಲಿ ಯಂತ್ರವನ್ನು ಅಭಿವೃದ್ಧಿಪಡಿಸಿದರೆ ಗಂಟೆಗೆ ನೂರಾರು ಕೆ.ಜಿ. ಅಡಿಕೆಯನ್ನು ವೇಗವಾಗಿ ವಿಂಗಡಿಸುವ ಸಾಧ್ಯತೆ ಇದೆ. ಗ್ರಾಮೀಣ ಭಾಗದ ಕೃಷಿ ಸಮಸ್ಯೆಗೆ ತಂತ್ರಜ್ಞಾನದ ಮೂಲಕ ಸೃಜನಶೀಲ ಪರಿಹಾರ ಕಂಡುಕೊಂಡ ಅನರ್ಘ್ಯ ಪಿ. ಹೊಳ್ಳ ಅವರ ಈ ಪ್ರಯತ್ನ ಮಲೆನಾಡಿನ ಕೃಷಿ ಕ್ಷೇತ್ರದಲ್ಲಿ ಹೊಸ ಭರವಸೆ ಮೂಡಿಸಿದ್ದು, ವಿದ್ಯಾರ್ಥಿನಿಯ ಸೃಜನಶೀಲತೆ ಹಾಗೂ ಅವರಿಗೆ ಮಾರ್ಗದರ್ಶನ ನೀಡಿದ ಶಿಕ್ಷಕರು ಮತ್ತು ಪೋಷಕರಿಗೆ ಅಭಿನಂದನೆಗಳು ಸಲ್ಲುತ್ತವೆ.




