
ಕರ್ನಾಟಕ ಸರ್ಕಾರದ ಸ್ವಾಮ್ಯದ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ, ಅಂದರೆ KBJNLನಲ್ಲಿ ಖಾಲಿ ಇರುವ ಲೀಗಲ್ ಆಫೀಸರ್ ಹುದ್ದೆಯ ಭರ್ತಿಗೆ ನೇರ ಸಂದರ್ಶನ ನಡೆಸಲಾಗುತ್ತಿದೆ. ಲೀಗಲ್ ಮ್ಯಾಟರ್ಸ್, ಅದರಲ್ಲೂ ಮುಖ್ಯವಾಗಿ ಭೂಸ್ವಾಧೀನ ಪ್ರಕರಣಗಳನ್ನು ನಿರ್ವಹಿಸಲು ಸೂಕ್ತ ಅರ್ಹತೆ ಹಾಗೂ ಅನುಭವ ಹೊಂದಿರುವ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ನೇಮಕಾತಿಯಲ್ಲಿ ಒಂದು ಲೀಗಲ್ ಆಫೀಸರ್ ಹುದ್ದೆ ಖಾಲಿ ಇದ್ದು, ಆಯ್ಕೆಯಾಗುವ ಅಭ್ಯರ್ಥಿಯು ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿರಬೇಕು. ಪದವಿ ಬಳಿಕ ಸಂಬಂಧಿತ ಕ್ಷೇತ್ರದಲ್ಲಿ 7ರಿಂದ 10 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು. ಅಭ್ಯರ್ಥಿಯ ಗರಿಷ್ಠ ವಯೋಮಿತಿ 38 ವರ್ಷ ಮೀರಿರಬಾರದು. ಇದರ ಜೊತೆಗೆ ಕನ್ನಡ ಭಾಷೆಯನ್ನು ಮಾತನಾಡಲು, ಓದಲು ಹಾಗೂ ಬರೆಯಲು ಕಡ್ಡಾಯವಾಗಿ ತಿಳಿದಿರಬೇಕು, ಇಂಗ್ಲಿಷ್ ಭಾಷೆ ಹಾಗೂ ಕಂಪ್ಯೂಟರ್ ಬಳಕೆಯ ಜ್ಞಾನವೂ ಅಗತ್ಯವಾಗಿದೆ. ಅಲ್ಲದೇ LLM, CS, CA ಅಥವಾ CMA ಸೇರಿದಂತೆ ವೃತ್ತಿಪರ ಕೋರ್ಸ್ಗಳನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ ಆಯ್ಕೆಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಹೀಗಾಗಿ ಅಗತ್ಯ ಅರ್ಹತೆ ಹಾಗೂ ಅನುಭವ ಹೊಂದಿರುವ ಕಾನೂನು ಪದವೀಧರರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.




