
ಅಜ್ಜಂಪುರ: ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ನಡೆಸುತ್ತಿದ್ದ ಆರೋಪದ ಮೇಲೆ ಪೊಲೀಸರು ದಾಳಿ ನಡೆಸಿ 10 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಳ್ಳಿಹೊಸಳ್ಳಿ ಗ್ರಾಮದ ಜ್ಞಾನೇಶ ಎಂಬುವರ ತೋಟದಲ್ಲಿ ಜೂಜಾಟ ನಡೆಯುತ್ತಿರುವ ಮಾಹಿತಿ ಮೇರೆಗೆ ತರೀಕೆರೆ ಉಪವಿಭಾಗದ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ದಾಳಿ ವೇಳೆ 11 ಮಂದಿ ಜೂಜಾಟದಲ್ಲಿ ತೊಡಗಿದ್ದರೆನ್ನಲಾಗಿದ್ದು, 10 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಓರ್ವ ಪರಾರಿಯಾಗಿದ್ದಾನೆ. ಸ್ಥಳದಿಂದ ₹1,06,971 ನಗದು, 52 ಇಸ್ಪೀಟ್ ಎಲೆಗಳು, 11 ಮೊಬೈಲ್ಗಳು ಹಾಗೂ 8 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 224/2026, ಕೆಪಿ ಕಾಯ್ದೆ ಕಲಂ 87ರಡಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.




