
ಉಡುಪಿ: ಬಾಳೆಕಾಯಿಗಳನ್ನು ತ್ವರಿತವಾಗಿ ಹಣ್ಣಾಗಿಸಲು ಹಾನಿಕಾರಕ ರಾಸಾಯನಿಕ ಹಾಗೂ ಕೃತಕ ಬಣ್ಣ ಬಳಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಉಡುಪಿಯ ಅಲೆವೂರು ಗ್ರಾಮದ ಕೆಮ್ತೂರು ಹಾಗೂ ದುಗ್ಲಿ ಪ್ರದೇಶಗಳಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಸಿಸ್ಟೆಂಟ್ ಕಮಿಷನರ್ ರಶ್ಮಿ ಎಸ್.ಆರ್. ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೂರು ಗೋದಾಮುಗಳನ್ನು ಪರಿಶೀಲಿಸಲಾಗಿದ್ದು, ರಾಸಾಯನಿಕ ಪದಾರ್ಥಗಳು ಹಾಗೂ ಬಳಕೆಯ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ. ರಾಸಾಯನಿಕ ಬಳಕೆಗೆ ಒಳಗಾಗಿದ್ದ ಸುಮಾರು 10,890 ಕೆಜಿ ಬಾಳೆಹಣ್ಣು, ಅಂದಾಜು 8.71 ಲಕ್ಷ ರೂಪಾಯಿ ಮೌಲ್ಯದ ಬಾಳೆಹಣ್ಣು ಪತ್ತೆಯಾಗಿದ್ದು, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಅವುಗಳನ್ನು ನಾಶಪಡಿಸಲಾಗಿದೆ.




