
ಕಡೂರು: ಕಡಿಮೆ ಬೆಲೆಗೆ ಬಟ್ಟೆಗಳನ್ನು ಖರೀದಿಸಿ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಪಡೆದು ಬಟ್ಟೆ ನೀಡದೆ ಮೋಸ ಮಾಡಿರುವ ಆರೋಪದ ಪ್ರಕರಣ ಕಡೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕಡೂರು ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿ ಜಬಿವುಲ್ಲಾ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಬೆಂಗಳೂರು ಮೂಲದ ಮನ್ಸೂರ್ ಅಹಮ್ಮದ್ ಹಾಗೂ ಹೈದರಾಬಾದ್ನ ಬಟ್ಟೆ ವ್ಯಾಪಾರಿಗಳಾದ ಮಹಮ್ಮದ್ ಶಾಯಿದ್ದುದ್ದೀನ್, ಮಹಮ್ಮದ್ ಮೊಹಿನುದ್ದೀನ್ ಮತ್ತು ಮಹಮ್ಮದ್ ಅಬ್ದುಲ್ ಹುಸಾಂ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದೂರಿನ ಪ್ರಕಾರ, ಮನ್ಸೂರ್ ಅಹಮ್ಮದ್ ಅವರು ಕಡಿಮೆ ಬೆಲೆಯಲ್ಲಿ ಹೈದರಾಬಾದ್ನಿಂದ ಬಟ್ಟೆಗಳನ್ನು ತರಿಸಿಕೊಡುವುದಾಗಿ ಜಬಿವುಲ್ಲಾ ಅವರಿಗೆ ಭರವಸೆ ನೀಡಿದ್ದರು. ಬಳಿಕ ಹೈದರಾಬಾದ್ನ ವ್ಯಾಪಾರಿಗಳನ್ನು ಪರಿಚಯಿಸಿ, ಒಂದು ಬಟ್ಟೆಗೆ 80 ರೂಪಾಯಿಯಂತೆ ಒಟ್ಟು 22,756 ಬಟ್ಟೆಗಳನ್ನು ಖರೀದಿಸುವ ಬಗ್ಗೆ ಮಾತುಕತೆ ನಡೆದಿತ್ತು. ಮುಂಗಡ ಹಣವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 17 ಲಕ್ಷದ 58 ಸಾವಿರ ರೂಪಾಯಿಗಳನ್ನು ವರ್ಗಾವಣೆ ಮಾಡಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ನಂತರ ಎ.ಎಸ್. ಟ್ರೇಡಿಂಗ್ ಮೂಲಕ ಸುಮಾರು 8 ಲಕ್ಷ ರೂಪಾಯಿ ಮೌಲ್ಯದ ಬಟ್ಟೆಗಳು ಮಾತ್ರ ಕಡೂರಿನ ಅಂಗಡಿಗೆ ತಲುಪಿದ್ದು, ಉಳಿದ 9 ಲಕ್ಷದ 58 ಸಾವಿರ ರೂಪಾಯಿ ಮೌಲ್ಯದ ಬಟ್ಟೆಗಳು ಇನ್ನೂ ಬಂದಿಲ್ಲ ಎಂದು ಆರೋಪಿಸಲಾಗಿದೆ. ಬಾಕಿ ಬಟ್ಟೆಗಳ ಬಗ್ಗೆ ವಿಚಾರಿಸಿದಾಗ ವಿಳಂಬವಾಗುತ್ತಿದೆ ಎಂದು ಮನ್ಸೂರ್ ಅಹಮ್ಮದ್ ಹೇಳುತ್ತಾ ಬಂದಿದ್ದಾರೆ ಎನ್ನಲಾಗಿದೆ. ಇದಲ್ಲದೆ, ವೈಯಕ್ತಿಕ ಹಣದ ಅವಶ್ಯಕತೆ ಇದೆ ಎಂದು ಮನ್ಸೂರ್ ಅಹಮ್ಮದ್ ಅವರು ಮತ್ತಷ್ಟು 3 ಲಕ್ಷದ 31 ಸಾವಿರ ರೂಪಾಯಿ ಪಡೆದುಕೊಂಡಿದ್ದು, ಅದರಲ್ಲಿ 50 ಸಾವಿರ ರೂಪಾಯಿ ಮಾತ್ರ ಹಿಂದಿರುಗಿಸಿದ್ದಾರೆ. ಉಳಿದ 2 ಲಕ್ಷದ 81 ಸಾವಿರ ರೂಪಾಯಿ ಬಾಕಿ ಇರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಒಟ್ಟು ಹಣಕಾಸಿನ ವ್ಯವಹಾರ ಹಾಗೂ ಬಟ್ಟೆ ಪೂರೈಕೆಯಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸಿ ಜಬಿವುಲ್ಲಾ ಅವರು ನಾಲ್ವರು ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಕಡೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.




