
ಮೊನ್ನೆ ಇದ್ದಕ್ಕಿದ್ದಂತೆಯೇ ಈ ಪ್ರಶ್ನೆ ಎದುರಾಯಿತು. ಬದುಕಿನ ಯಶಸ್ಸಿಗೆ ಯಾವುದು ಮುಖ್ಯ? ವಿದ್ಯೆ, ದುಡ್ಡು, ಮನೆತನ, ಗೆಳೆತನ, ಗಾಡ್ಫಾದರ್ ಅಫ್ಕೋರ್ಸ್ ಅದೃಷ್ಠ… ತುಂಬಾ ಓದಿಕೊಂಡು ದೊಡ್ಡ ಹುದ್ದೆ ಗಳಿಸಿಕೊಂಡು ಆ ಕಂಪನಿಯಲ್ಲಿಯೇ ಮತ್ತಷ್ಟು ಉನ್ನತ ಸ್ಥಾನಕ್ಕೇರಿದವನನ್ನು ನೀವು ಯಶಸ್ವಿ ವ್ಯಕ್ತಿ ಅಂತ ಕರೀತೀರಾ..? ತುಂಬಾ ದುಡ್ಡಿದ್ದು ಅದನ್ನ ಇನ್ವೆಸ್ಟ್ ಮಾಡಿ ಅದ್ರಿಂದ ಮತ್ತಷ್ಟು ಹಣ ಗಳಿಸುವುದು ಯಶಸ್ಸಾ? ಇನ್ನು ಕೆಲವರಿರುತ್ತಾರೆ, ಅವರ ಯಾವುದೇ ಕೆಲಸ ಆಗಬೇಕಾದ್ರು ನಾವು ಈ ಫ್ಯಾಮಿಲಿಯವರು ಅಂತ ಹೇಳಿಕೊಂಡೋ, ಅಥವಾ ನಾನು ಇಂತಹವರ ಮೊಮ್ಮಗ, ಮಗ ಅಂತ ಹೇಳಿಕೊಂಡೋ ಯಾವುದೇ ಕೆಲಸ ಮಾಡಿಸಿಕೊಳ್ಳುವವರು. ಇದನ್ನ ನೀವು ಯಶಸ್ಸು ಅಂತೀರಾ..? ಗೆಳೆಯರ ಜೊತೆಯಲ್ಲಿ, ಒಬ್ಬರ್ಯಾರನ್ನೋ ಬೆನ್ನ ಹಿಂದಿರಿಸಿಕೊಂಡು ಸಾಧನೆ ಮಾಡುವುದನ್ನೂ ಸಕ್ಸಸ್ ಅಂತ ಹೇಳಬಹುದಾ..? ಕೆಲವರಿರುತ್ತಾರೆ. ಇದ್ದಕ್ಕಿದ್ದಂತೆ ಬೆಳೆದು ಬಿಡುತ್ತಾರೆ! ಅವರು ಮುಟ್ಟಿದ್ದೆಲ್ಲ ಚಿನ್ನವಾಗುತ್ತಿರುತ್ತದೆ. ಯಾವ ಕ್ಷೇತ್ರದಲ್ಲಿ ಕೈ ಹಾಕಿದರು ಅವರು ಯಶಸ್ವಿಯಾಗಿ ನಿಭಾಯಿಸುತ್ತಾರೆ. ಅವರದ್ದು ಅದೃಷ್ಠ ಅಂತ ನಿಮಗೇ ನೀವೇ ಹೇಳಿಕೊಂಡು ಸಮಾಧಾನ ಪಟ್ಟುಕೊಳ್ಳುತ್ತೀರಿ. ಅರೇ, ಇದೇನಿದು ಇದಾವುದು ಯಶಸ್ಸು ಅಲ್ಲ ಅಂದ್ರೆ ಮತ್ತಾವುದನ್ನ ನೀವು ಸಕ್ಸಸ್ ಅಂತ ಕರಿತೀರಿ.. ಅಂತ ನೀವು ಕೇಳಬಹುದು. ದೊಡ್ಡ ಕಂಪನಿ ಉದ್ಯೋಗಿ ಬಡ್ತಿ ಪಡೆದು ಆ ಕಂಪನಿಯಲ್ಲಿಯೇ ರೀಟೈರ್ಡ್ ಆದ್ರೆ ಅಲ್ಲಿ ಆತ ಸಾಧಿಸಿದ್ದೇನು? ಆತನ ಬಡ್ತಿ, ಒಳ್ಳೆಯ ಹೆಸರು, ಶಿಸ್ತು ಎಲ್ಲವು ಕೂಡ ಆ ಹುದ್ದೆಯ ಒಂದು ಭಾಗ ಮತ್ತು ಅವನಿಗೆ ಹಾಗೂ ಆ ಕಂಪನಿಗೆ ಅದು ಅನಿವಾರ್ಯ. ಆದರೆ ಅದೇ ವ್ಯಕ್ತಿ ಆ ಕಂಪನಿಯಿಂದ ಹೊರಬಂದು ಅಂಥದ್ದೇ ಒಂದು ಸಂಸ್ಥೆಯನ್ನು ಹುಟ್ಟು ಹಾಕಿ ತಾನು ಕೆಲಸ ಮಾಡಿದ ಕಂಪನಿಗೆ ಸವಾಲು ಒಡ್ಡುತ್ತಾನಲ್ಲ ಅದನ್ನು ಯಶಸ್ಸು ಅಂತ ಕರೀಬಹುದು ಹಾಗೆಯೇ ಅಪ್ಪನ ಹೆಸರಿನಲ್ಲಿ ಬದುಕುವ ಮಕ್ಕಳು ಯಾರದ್ದೋ ನೆರಳಲ್ಲಿ ಬೆಳೆಯುವ ದೊಡ್ಡ ವ್ಯವಹಾರಸ್ಥರು ಇವರದ್ದೆಲ್ಲ ಯಶಸ್ಸು ಹೇಗಾಗುತ್ತದೆ? ಅಪ್ಪನ ಆಸ್ತಿಯನ್ನು ಬೋಗಿಸುತ್ತಾ ಅದನ್ನು ಮತ್ತಷ್ಟು ವೃದ್ದಿಸುವ ಮಕ್ಕಳು ಬುದ್ದಿವಂತರಿರಬಹುದು, ಶ್ರಮ ಜೀವಿಗಳೂ ಆಗಿರಬಹುದು. ಆದರೆ ಖಂಡಿತವಾಗಿಯೂ ಅದನ್ನ ಯಶಸ್ಸು ಅಂತ ಹೇಳಲು ಸಾಧ್ಯವಿಲ್ಲ. ಬರಡು ಭೂಮಿಯನ್ನು ಕೊಂಡು ಅದನ್ನು ಹದಗೊಳಿಸಿ ಬಂಗಾರದ ಬೆಳೆ ಬೆಳೆಯುವ ರೈತ ಯಶಸ್ವಿ ರೈತ. ಅಪ್ಪ ಆಸ್ತಿಯನ್ನು ಬಿಟ್ಟು ಹೊರನಡೆದು ತಾನೇ ಸಂಪಾದಿಸಿದವನು ನಿಜವಾದ ಯಶಸ್ವಿ. ಹಾಗಾದರೆ ಯಶಸ್ಸು ಸಿಗಬೇಕಾದರೆ ಏನು ಮಾಡಬೇಕು? ಇಷ್ಟಕ್ಕೂ ಯಶಸ್ಸು ಅನ್ನೋ ಪ್ರೇಯಸಿ ಯಾವುದಕ್ಕೆ ಒಲಿಯಬಹುದು? ಶ್ರದ್ದೆ, ಹಟ, ಛಲ, ಹುಮ್ಮಸ್ಸು ತಾಳ್ಮೆ ಎಲ್ಲವನ್ನು ಈ ಸಕ್ಸಸ್ಗೆ ನೀವು ಬಲಿಕೊಟ್ಟು ಒಲಿಸಿಕೊಳ್ಳಬೇಕು. ಹಾಗಾದರೆ ಈ ಹಟ, ಶ್ರದ್ದೆ ಎಲ್ಲಿಂದ ಬರುತ್ತೆ ಅಂತ ನೀವು ಕೇಳ್ತೀರಾ..? ಎಸ್! ನಿಮ್ಮಲ್ಲೊಂದು ಛಲ, ಗೆದ್ದೇ ಗೆಲ್ತೀನಿ ಅನ್ನೋ ಹುಮ್ಮಸ್ಸು ಬರಬೇಕಾದರೆ ನಿಮ್ಗೆ ಅವಮಾನವಾಗಬೇಕು. ತಮಾಷೆಯಲ್ಲ. ಅವಮಾನ ಅನ್ನೋದು ನಿಮ್ಗೆ ನೋವು ಕೊಡುತ್ತೆ ನಿಜ. ಆದ್ರೆ, ನಾವು ಬದಲಾಗೋದಿಕ್ಕೆ ಅದು ಸಹಾಯ ಮಾಡುತ್ತೆ. ಒಂದು ಕಂಪನಿಯಿಂದ ಅವಮಾನಗೊಂಡು ಹೊರಬಂದವನು ಅದೇ ಕಂಪನಿಗೆ ಸೆಡ್ಡು ಹೊಡೆದು ಇನ್ನೊಂದು ಸಂಸ್ಥೆಯನ್ನು ಕಟ್ಟಬಲ್ಲ. ಮನೆಯವರಿಂದ, ಸಮಾಜದಿಂದ, ಬಂಧುಬಳಗದವರಿಂದ ಆಗುವ ಅವಮಾನಗಳು ನಮ್ಮನ್ನು ಛಲದತ್ತ ಕೊಂಡೊಯ್ಯಬೇಕು.. ನಮ್ಮಲ್ಲಿ ಹುಟ್ಟುವ ಛಲ ಯಶಸ್ಸಿನತ್ತ ಕೈ ಹಿಡಿದು ಕರೆದುಕೊಂಡು ಬಿಡುತ್ತದೆ. ಆದ್ರೆ ದುರಂತ ಏನು ಗೊತ್ತಾ. ನಮ್ಮಲ್ಲಿ ತುಂಬಾ ಜನಕ್ಕೆ ಅವಮಾನ.. ಆದರೆ ಅವರಲ್ಲಿ ಛಲದ ಬದಲು ಕೀಳರಿಮೆ ಬಂದು ಬಿಡುತ್ತೆ. ಹೌದು ನನ್ ಕೈಲಿ ಏನು ಆಗಲ್ಲ, ನಾನ್ ಯೂಸ್ ಲೆಸ್, ನನ್ನ ಯಾರು ಅರ್ಥ ಮಾಡಿಕೊಂಡಿಲ್ಲ, ನನ್ ಸಪೋರ್ಟಿಗೆ ಯಾರು ಇಲ್ಲ ಹೀಗೆಲ್ಲ ನಿಮ್ಗೆ ಅನಿಸಿದೆ ಅಂತಾದ್ರೆ ನಿಮ್ಗೆ ಅವಮಾನ ಆಗಿದೆ. ಆದ್ರೆ ಛಲ ಮೂಡಿಸಿಕೊಳ್ಳೋ ಬದಲು ನೀವು ನೆಗೆಟೀವ್ ಯೋಚನೆ ಮಾಡ್ತಾ ಇದ್ದೀರಿ. ಸ್ಟಾಪ್ ದಟ್ ನಾನ್ಸೆನ್ಸ್. ನಿಮ್ಮ ತಾಕತ್ತಿನ ಬಗ್ಗೆ, ನಿಮ್ಮ ಕ್ಯಾಪಾಸಿಟಿ ಬಗ್ಗೆ ಯಾರೋ ಕೊಟ್ಟಿರೋ ಸರ್ಟಿಫಿಕೇಟನ್ನ ನೀವು ಯಾಕೆ ನಂಬಿಕೊಂಡಿದ್ದೀರಿ? ಅವರು ಕೊಟ್ಟಿದ್ದು ನಿಮ್ಮ ಶುಗರ್, ಬಿಪಿ ರಿಪೋರ್ಟ್ ಅಲ್ಲ. ನಿಮ್ಮ ತಾಕತ್ತು ನಿಮಗಿಂತ ಅವರಿಗೇನು ಗೊತ್ತು. ಅವಮಾನ ಆಗಿದೆ. ಖುಷಿ ಪಡಿ ಯಶಸ್ಸು ಹತ್ತು ಹೆಜ್ಜೆಯ ದೂರದಲ್ಲಿದೆ. ಛಲದ ಮೆಟ್ಟಿಲನ್ನು ಸೃಷ್ಠಿಸಿಕೊಳ್ಳಿ… ಫಲಿತಾಂಶ ಏನು ಅಂತ ನಂಗೆ ಹೇಳಿ. ಆಲ್ ದಿ ಬೆಸ್ಟ್…




