
ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದದ ನಡುವೆಯೇ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಸಂಬಂಧಕ್ಕೆ ಹೊಸ ತಿರುವು ಸಿಗುವ ಸಾಧ್ಯತೆ ಕಾಣಿಸಿಕೊಂಡಿದ್ದು, ಕಾವೇರಿ ನೀರಿನ ವಿವಾದ ವಿಚಾರವಾಗಿ ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ನಡುವಿನ ಮಾತುಕತೆಗೆ ಸಿದ್ಧತೆ ನಡೆಯುತ್ತಿದೆ ಎಂದು ತಿಳಿದು ಬಂದಿದ್ದು, ಈ ಸಭೆ ನಡೆದರೆ, ಹಲವು ದಶಕಗಳ ಬಳಿಕ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಕಾವೇರಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಒಂದೆಡೆ ಸೇರಿ ಮಾತುಕತೆ ನಡೆಸಿದಂತಾಗುತ್ತದೆ. ತಮಿಳುನಾಡು ಸರ್ಕಾರದಿಂದ ಸಭೆಗೆ ಮನವಿ ಬಂದಿದ್ದು, ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಆಗಸ್ಟ್ ೩ ರಂದು ಬೆಂಗಳೂರಿನಲ್ಲಿ ಮಾತುಕತೆ ನಡೆಸಲು ಆಹ್ವಾನ ನೀಡಿದ್ದಾರೆ ಎನ್ನಲಾಗಿದ್ದು, ಆದರೆ ಈ ಆಹ್ವಾನವನ್ನು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಒಪ್ಪಿಕೊಂಡಿದ್ದಾರೆಯೇ ಎಂಬುದು ತಿಳಿದು ಬಂದಿಲ್ಲ. ಈ ಸಭೆಯಲ್ಲಿ ಮೇಕೆದಾಟು ಜಲಾಶಯ ಯೋಜನೆ, ಮಳೆ ಕೊರತೆಯ ವರ್ಷಗಳಲ್ಲಿ ಕಾವೇರಿ ನೀರು ಹಂಚಿಕೆ ಕುರಿತು ಪರಸ್ಪರ ಒಪ್ಪಿಗೆಯ ವ್ಯವಸ್ಥೆ ಮತ್ತು ಬೆಂಗಳೂರು ಹೊಸೂರು ಮೆಟ್ರೋ ರೈಲು ಸಂಪರ್ಕ ಯೋಜನೆ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ.




