
ಮೂಡಿಗೆರೆ: ಪರಿಸರ ಸಂರಕ್ಷಣೆ ಹಾಗೂ ಹಸಿರು ಪರಿಸರ ನಿರ್ಮಾಣದ ಉದ್ದೇಶದಿಂದ ರೋಟರಿ ಕ್ಲಬ್ (RI Dist 3182, Zone 08) ವತಿಯಿಂದ ತಾಲೂಕಿನ ಹಳಿಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ರೋಟರಿ ಸದಸ್ಯರು ಹಾಗೂ ಶಾಲಾ ವಿದ್ಯಾರ್ಥಿಗಳು ಜಂಟಿಯಾಗಿ ವಿವಿಧ ತಳಿಯ ಸಸಿಗಳನ್ನು ನೆಟ್ಟು ಪರಿಸರ ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಪಾಸ್ಟ್ ಝೋನಲ್ ಲೆಫ್ಟಿನೆಂಟ್ ಆರ್ಟಿಎನ್. ಆದರ್ಶ ಅವರು, ಮರಗಳ ನಾಶದಿಂದ ಮಳೆಯ ಕೊರತೆ ಹಾಗೂ ಶುದ್ಧ ಗಾಳಿಯ ಅಭಾವ ಉಂಟಾಗುತ್ತಿದ್ದು, ಒಂದು ಮರವನ್ನು ಕಡಿದರೆ ಅದರ ಬದಲಿಗೆ ಕನಿಷ್ಠ ಎರಡು ಸಸಿಗಳನ್ನು ನೆಟ್ಟು ಪೋಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ತಿಳಿಸಿದರು. ಮಕ್ಕಳಲ್ಲಿ ಶಾಲಾ ಹಂತದಿಂದಲೇ ಪರಿಸರ ಕಾಳಜಿಯನ್ನು ಬೆಳೆಸಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಬಿ.ಕೆ. ದಿನೇಶ್, ಕಾರ್ಯದರ್ಶಿ ಆರ್ಟಿಎನ್. ಸಂತೋಷ್, ನಿಕಟಪೂರ್ವ ಅಧ್ಯಕ್ಷ ಆರ್ಟಿಎನ್. ಪ್ರಸಾದ್, ಸದಸ್ಯರಾದ ಆರ್ಟಿಎನ್. ಸಂದೀಪ್, ಆರ್ಟಿಎನ್. ಸುಭಾಷ್, ಆರ್ಟಿಎನ್. ಅವಿನ್ ಹಾಗೂ ಆರ್ಟಿಎನ್. ಸುನಿಲ್ ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕ ಮಂಜು ನಾಯ್ಕ್, ಶಿಕ್ಷಕಿ ರೇಣುಕಮ್ಮ, ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮಕ್ಕೆ ಬೆಂಬಲ ನೀಡಿದರು. ಅಂತಿಮವಾಗಿ “ಒಂದು ಸಸಿ ನೆಡೋಣ – ಪರಿಸರ ಉಳಿಸೋಣ” ಹಾಗೂ “ಸೇವೆಯೇ ಶ್ರೇಷ್ಠ” ಎಂಬ ಸಂದೇಶದೊಂದಿಗೆ ಕಾರ್ಯಕ್ರಮ ಅರ್ಥಪೂರ್ಣವಾಗಿ ಸಮಾಪ್ತಿಯಾಯಿತು.




