ಬೆಂಗಳೂರು: ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿ ಇಲಾಖೆಯಲ್ಲಿ ಪಾರದರ್ಶಕತೆ ಹಾಗೂ ಸಾರ್ವಜನಿಕ ಹೊಣೆಗಾರಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಇತಿಹಾಸದಲ್ಲೇ ಅತಿದೊಡ್ಡ ವರ್ಗಾವಣೆ ಪ್ರಕ್ರಿಯೆ ನಡೆಸಿದ್ದು, ಒಟ್ಟು 160 ಅಧಿಕಾರಿಗಳನ್ನು ವರ್ಗಾಯಿಸಿ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದಂತೆ ನಡೆದ ಈ ಮೇಜರ್ ಸರ್ಜರಿಯಲ್ಲಿ 131 ಭೂವಿಜ್ಞಾನಿಗಳು, 23 ಹಿರಿಯ ಭೂವಿಜ್ಞಾನಿಗಳು ಹಾಗೂ 6 ಉಪನಿರ್ದೇಶಕರು ಸೇರಿದ್ದು, ದಶಕಗಳ ಕಾಲ ಒಂದೇ ಸ್ಥಳದಲ್ಲಿ ಅಥವಾ ಸ್ವಂತ ಹಾಗೂ ನೆರೆಯ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಇಲಾಖೆಯ ಆದೇಶದ ಪ್ರಕಾರ, ಒಂದೇ ಸ್ಥಳದಲ್ಲಿ ದೀರ್ಘಕಾಲ ಸೇವೆ ಸಲ್ಲಿಸುತ್ತಿದ್ದರಿಂದ ಸ್ಥಳೀಯ ಪ್ರಭಾವ, ಸ್ವಹಿತಾಸಕ್ತಿ ಹಾಗೂ ಆಡಳಿತಾತ್ಮಕ ಮತ್ತು ಸಾರ್ವಜನಿಕ ದೂರುಗಳಿಗೆ ಅವಕಾಶವಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಮಟ್ಟದ ಏಕಸ್ವಾಮ್ಯವನ್ನು ಮುರಿದು, ವಸ್ತುನಿಷ್ಠತೆ, ಪಾರದರ್ಶಕತೆ ಹಾಗೂ ಸಾರ್ವಜನಿಕ ಉತ್ತರದಾಯಿತ್ವವನ್ನು ಮರುಸ್ಥಾಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ವರ್ಗಾವಣೆಯಾದ ಅಧಿಕಾರಿಗಳು ತಕ್ಷಣವೇ ಹೊಸ ಕರ್ತವ್ಯ ಸ್ಥಳಕ್ಕೆ ವರದಿ ಮಾಡಿ ಕೇಂದ್ರ ಕಚೇರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಗಣಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖಾ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಈ ವಿಷಯವನ್ನು ಪ್ರಸ್ತಾಪಿಸಿದ್ದು, ಮುಖ್ಯಮಂತ್ರಿಗಳ ಸೂಚನೆಯಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಗಣಿ ಇಲಾಖೆಯ ಇತಿಹಾಸದಲ್ಲೇ ಅತಿದೊಡ್ಡ ವರ್ಗಾವಣೆ ಎಂದು ಪರಿಗಣಿಸಲ್ಪಟ್ಟಿರುವ ಈ ಕ್ರಮದಿಂದ ಅಕ್ರಮ ಗಣಿಗಾರಿಕೆಗೆ ಕಡಿವಾಣ, ಗಣಿ ಆದಾಯ ಹೆಚ್ಚಳ ಹಾಗೂ ಇಲಾಖೆಯಲ್ಲಿ ಪಾರದರ್ಶಕ ಆಡಳಿತಕ್ಕೆ ಬಲ ಸಿಗಲಿದೆ ಎಂದು ಸರ್ಕಾರ ನಿರೀಕ್ಷಿಸಿದೆ.
