
ಕಾರ್ಕಳ: ಕಾರ್ಕಳ ತಾಲೂಕು ಚಿನ್ನ-ಬೆಳ್ಳಿ ಕೆಲಸಗಾರರ ಸಂಘದ ಮಹಾಸಭೆಯು ಜುಲೈ 12ರಂದು ನೆಕ್ಲಾಜೆ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನೆಕ್ಲಾಜೆ ಶ್ರೀ ಕಾಳಿಕಾಂಬ ದೇವಸ್ಥಾನದ ಆಡಳಿತ ಮೊಕ್ತೆಸರ್ ಪಿ. ರವಿ ಆಚಾರ್ಯ ಪೆರ್ವಾಜೆ ಮಾತನಾಡಿ, ಚಿನ್ನ-ಬೆಳ್ಳಿ ಕೆಲಸಗಾರರ ಸಂಘವು ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಂ. ರಮೇಶ್ ಆಚಾರ್ಯ ಮಾತನಾಡಿ, ಯಾವುದೇ ಸಂಘ-ಸಂಸ್ಥೆಯ ಅಭಿವೃದ್ಧಿಗೆ ಸದಸ್ಯರ ಸಲಹೆಯಷ್ಟೇ ಅಲ್ಲ, ಅವರ ಸಹಕಾರವೂ ಅಗತ್ಯವಾಗಿದ್ದು, ಆರೋಗ್ಯ ನಿಧಿ, ಶೈಕ್ಷಣಿಕ ನಿಧಿ ಹಾಗೂ ಕಲ್ಯಾಣ ನಿಧಿಗೆ ಸದಸ್ಯರು ಸಹಕಾರ ನೀಡುವ ಮೂಲಕ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಚಿನ್ನಾಭರಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಹಾಗೂ ನೆಕ್ಲಾಜೆ ಶ್ರೀ ಕಾಳಿಕಾಂಬ ದೇವಸ್ಥಾನದ ಆಡಳಿತ ಮೊಕ್ತೆಸರ್ ಆಗಿ ಆಯ್ಕೆಯಾಗಿರುವ ಪಿ. ರವಿ ಆಚಾರ್ಯ ಪೆರ್ವಾಜೆ, ಸ್ವರ್ಣಾಭರಣ ತಯಾರಕರಾದ ಸುರೇಶ್ ಆಚಾರ್ಯ (ಪಿ.ಎಚ್. ಹವಾಲ್ದಾರ್ ಬೆಟ್ಟು) ಹಾಗೂ ಎಸ್ಎಸ್ಎಲ್ಸಿ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿಶ್ವಕರ್ಮ ಸಮಾಜದ ವಿದ್ಯಾರ್ಥಿನಿ ತ್ರಿಷಾ ಆಚಾರ್ಯ ಬೆಳ್ಮಣ್ಣ್ ಅವರನ್ನು ಗೌರವಿಸಲಾಯಿತು. ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, 4ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ನೋಟ್ಬುಕ್ ವಿತರಣೆ, ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ಮತ್ತು ಮಹಾಸಭೆಯ ಅಂಗವಾಗಿ ಆಯೋಜಿಸಿದ್ದ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅತಿಥಿಯಾಗಿ ಭಾಗವಹಿಸಿದ್ದ ವಕೀಲೆ ಶ್ರೀಮತಿ ಪ್ರೇಮ ವಿ. ಆಚಾರ್ಯ ಅವರು ಕಾನೂನು ಕುರಿತು ಉಪಯುಕ್ತ ಮಾಹಿತಿ ನೀಡಿದರು. ವೇದಿಕೆಯಲ್ಲಿ ಉಡುಪಿ ಜಿಲ್ಲಾ ಚಿನ್ನ-ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ರವಿಚಂದ್ರ ಆಚಾರ್ಯ ಮಾರಾಳಿ, ಕಾಳಿಕಾಂಬ ದೇವಸ್ಥಾನದ ನಿಕಟಪೂರ್ವ ಆಡಳಿತ ಮೊಕ್ತೆಸರ್ ರಾಮಚಂದ್ರ ಆಚಾರ್ಯ ಅತ್ತೂರು, ದ್ವಿತೀಯ ಮೊಕ್ತೆಸರ್ ಸುರೇಶ್ ಆಚಾರ್ಯ ನಿಟ್ಟೆ ಹಾಗೂ ತೃತೀಯ ಮೊಕ್ತೆಸರ್ ಪಿ. ವಸಂತ ಆಚಾರ್ಯ ಉಪಸ್ಥಿತರಿದ್ದರು. ಬಳಿಕ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷರಾಗಿ ಎಂ. ರಮೇಶ್ ಆಚಾರ್ಯ, ಉಪಾಧ್ಯಕ್ಷರಾಗಿ ವೈ.ಟಿ. ಪ್ರಕಾಶ್ ಆಚಾರ್ಯ, ಕಾರ್ಯದರ್ಶಿಯಾಗಿ ಕೆ. ಸಂತೋಷ ಆಚಾರ್ಯ, ಜೊತೆ ಕಾರ್ಯದರ್ಶಿಯಾಗಿ ದಿವಾಕರ ಆಚಾರ್ಯ ನಿಟ್ಟೆ, ಕೋಶಾಧಿಕಾರಿಯಾಗಿ ಪ್ರಕಾಶ್ ಆಚಾರ್ಯ ಮರತಂಗಡಿ, ಸಂಘಟನಾ ಕಾರ್ಯದರ್ಶಿಯಾಗಿ ಅಶೋಕ ಆಚಾರ್ಯ ಅಂಡಾರ್, ಕ್ರೀಡಾ ಕಾರ್ಯದರ್ಶಿಯಾಗಿ ಅರುಣ್ ಆಚಾರ್ಯ ಸಾಲ್ಮರ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶ್ರೀನಿವಾಸ ಆಚಾರ್ಯ ರೇಂಜಾಳ, ಕೆ. ಸತೀಶ್ ಆಚಾರ್ಯ, ಗಿರೀಶ್ ಆಚಾರ್ಯ ಬೈಲೂರು, ಮೌನೇಶ್ ಕಾರ್ಕಳ, ವಿಶ್ವನಾಥ್ ಆಚಾರ್ಯ ಕಾರ್ಕಳ, ನಿಖಿಲ್ ಕಾರ್ಕಳ, ಪ್ರವೀಣ್ ಆಚಾರ್ಯ, ಜಯಂತ್ ಪೆರ್ವಾಜೆ, ರಮೇಶ್ ಆಚಾರ್ಯ ಬಂಗ್ಲೆಗುಡ್ಡೆ, ವಿನೋದ್ ಆಚಾರ್ಯ, ಪುರಂದರ್ ಮಾರ್ನಾಡ್ ಹಾಗೂ ಸಂತೋಷ್ ಅತ್ತೂರು ಆಯ್ಕೆಯಾದರು. ಕಾರ್ಯಕ್ರಮದಲ್ಲಿ ಎಂ. ರಮೇಶ್ ಆಚಾರ್ಯ ಸ್ವಾಗತಿಸಿ, ಕೆ. ಸಂತೋಷ ಆಚಾರ್ಯ ನಿರೂಪಿಸಿದರು ಹಾಗೂ ಅಶೋಕ ಆಚಾರ್ಯ ಅಂಡಾರ್ ವಂದಿಸಿದರು.




