
ಕಾರ್ಕಳ: ಸಾಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುರತಂಗಡಿ ಪರಿಸರದಲ್ಲಿರುವ ಬ್ಯಾಂಕ್ ಆಫ್ ಬರೋಡ ಶಾಖೆಯ ಎದುರಿನ ಸುಮಾರು 50 ಮೀಟರ್ ಉದ್ದದ ಸರ್ವಿಸ್ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿರುವ ಕುರಿತು ಸಾಮಾಜಿಕ ಜಾಲತಾಣಗಳು ಹಾಗೂ ವೆಬ್ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆಯೇ ಹೆದ್ದಾರಿ ಇಲಾಖೆ ಹಾಗೂ ಗುತ್ತಿಗೆ ಸಂಸ್ಥೆ ಎಚ್ಚೆತ್ತು, ಬಿರುಕು ಬಿದ್ದ ಭಾಗದ ಡಾಮರನ್ನು ಅಗೆದು ತೆಗೆದು ಮರು ಡಾಮರೀಕರಣ ಕಾಮಗಾರಿ ಕೈಗೊಂಡಿತು. ಸಂಜೆ 4 ಗಂಟೆಯೊಳಗೆ ಬಿರುಕು ಬಿದ್ದ ಪ್ರದೇಶದ ಮರು ಡಾಮರೀಕರಣ ಪೂರ್ಣಗೊಳಿಸುವುದರ ಜೊತೆಗೆ ಸುತ್ತಮುತ್ತಲಿನ ಹೆದ್ದಾರಿಯ ಇತರ ಭಾಗಗಳಲ್ಲಿದ್ದ ರಸ್ತೆ ಹೊಂಡಗಳಿಗೂ ಡಾಮರು ಹಾಕಿ ದುರಸ್ತಿ ಮಾಡಲಾಯಿತು. ಇನ್ನೂ ಒಂದೆರಡು ದಿನಗಳಲ್ಲಿ ಮುರತಂಗಡಿ ಸರ್ವಿಸ್ ರಸ್ತೆಯ ಬದಿಯ ಬಾವಿ ಇರುವ ಪ್ರದೇಶದಲ್ಲಿ ಶಾಶ್ವತ ರಚನೆಯ ರಿವೆಟ್ಮೆಂಟ್ ವಾಲ್ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು ಹಾಗೂ ಅಲ್ಲಿಯವರೆಗೆ ತಾತ್ಕಾಲಿಕ ಬ್ಯಾರಿಕೇಡ್ ಅಳವಡಿಸಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ದಿಲೀಪ್ ಬಿಲ್ಡ್ಕಾನ್ ಸಂಸ್ಥೆಯ ಕನ್ಸ್ಟ್ರಕ್ಷನ್ ಮ್ಯಾನೇಜರ್ ಬಾಲಾಜಿ ಅವರು ಹೋರಾಟ ಸಮಿತಿಯ ಪ್ರಮುಖ ಸಾಣೂರು ನರಸಿಂಹ ಕಾಮತ್ ಅವರಿಗೆ ತಿಳಿಸಿದ್ದಾರೆ. ಅಲ್ಲದೆ, ಸಾಣೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದಾಸ್ತಾನು ಮಳಿಗೆಗೆ ಸಂಪರ್ಕಿಸುವ ಮಣ್ಣಿನ ರಸ್ತೆಗೆ ತಾತ್ಕಾಲಿಕವಾಗಿ ವೆಟ್ ಮಿಕ್ಸ್ ಹೊದಿಕೆ ಹಾಕಲಾಗುವುದು ಹಾಗೂ ಮುಂದಿನ ವಾರ ಹೆದ್ದಾರಿ ಡಾಮರೀಕರಣ ಕಾಮಗಾರಿ ನಡೆಯುವ ವೇಳೆ ಸುಮಾರು 20 ಮೀಟರ್ ಉದ್ದದ ರಸ್ತೆಗೆ ಡಾಮರೀಕರಣ ಮಾಡಿ ಘನ ವಾಹನಗಳ ಸಂಚಾರಕ್ಕೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ವರದಿ: ಅರುಣ್ ಭಟ್ ಕಾರ್ಕಳ




