
ಕಾರ್ಕಳ: ಸಾಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುರತ್ತಂಗಡಿ ಪ್ರದೇಶದ ರಾಷ್ಟ್ರೀಯ ಹೆದ್ದಾರಿ–169ರ ಸರ್ವಿಸ್ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಸುಮಾರು 800 ಮೀಟರ್ ಉದ್ದದ ಸರ್ವಿಸ್ ರಸ್ತೆ ಕಾಮಗಾರಿ ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ವ್ಯಾಪಕ ಪ್ರತಿಭಟನೆ ಹಾಗೂ ಜನರ ತೀವ್ರ ಒತ್ತಾಯದ ಬಳಿಕ ಸುಮಾರು ಮೂರು ತಿಂಗಳ ಹಿಂದೆ ರಸ್ತೆಗೆ ಡಾಮರೀಕರಣ ಮಾಡಲಾಗಿತ್ತು. ಆದರೆ ಇದೀಗ ರಸ್ತೆಯ ಮಧ್ಯಭಾಗದಲ್ಲಿ ಸುಮಾರು 50 ಮೀಟರ್ ಉದ್ದಕ್ಕೆ ಬಿರುಕು ಕಾಣಿಸಿಕೊಂಡಿದ್ದು, ಪ್ರತಿನಿತ್ಯ ಬ್ಯಾಂಕ್ ಆಫ್ ಬರೋಡ ಸಾಣೂರು ಶಾಖೆ, ಸಾಣೂರು ವ್ಯವಸಾಯ ಸೇವಾ ಸಹಕಾರಿ ಸಂಘ, ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಮುದ್ದಣ್ಣನಗರ ಭಾಗಕ್ಕೆ ಸಂಚರಿಸುವ ಸಾರ್ವಜನಿಕರು ಮತ್ತು ವಾಹನ ಸವಾರರು ರಸ್ತೆ ಕುಸಿಯುವ ಭೀತಿಯಲ್ಲಿ ಓಡಾಡುವಂತಾಗಿದೆ. ಬ್ಯಾಂಕ್ ಆಫ್ ಬರೋಡ ಕಟ್ಟಡದ ಪಕ್ಕದ ಜಮೀನಿನಲ್ಲಿ ಸರ್ವಿಸ್ ರಸ್ತೆಯ ಬದಿಯಲ್ಲೇ ತೆರೆದ ಬಾವಿಯಿದ್ದು, ಸುಮಾರು 6 ಅಡಿ ಎತ್ತರಕ್ಕೆ ಮಣ್ಣು ಸುರಿದು ರಸ್ತೆ ನಿರ್ಮಿಸಿರುವುದರ ಜೊತೆಗೆ ಬದಿಗೆ ತಡೆಗೋಡೆ ನಿರ್ಮಿಸದಿರುವುದು ಅಪಾಯವನ್ನು ಮತ್ತಷ್ಟು ಹೆಚ್ಚಿಸಿದೆ. ಈ ವರ್ಷ ಜೂನ್ ತಿಂಗಳಲ್ಲಿ ಹೆಚ್ಚಿನ ಮಳೆ ಸುರಿಯದ ಕಾರಣ ದೊಡ್ಡ ಅನಾಹುತ ಸಂಭವಿಸಿಲ್ಲ. ಆದರೆ ಮುಂದಿನ ದಿನಗಳಲ್ಲಿ ಭಾರೀ ಮಳೆ ಸುರಿದರೆ ರಸ್ತೆಯ ಬದಿ ಕುಸಿದು ಇಡೀ ಸರ್ವಿಸ್ ರಸ್ತೆ ಧರಾಶಾಯಿಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಗಂಭೀರವಾಗುವ ಮುನ್ನವೇ ರಾಷ್ಟ್ರೀಯ ಹೆದ್ದಾರಿ ಇಲಾಖೆ ಹಾಗೂ ಗುತ್ತಿಗೆದಾರರು ತಕ್ಷಣ ರಸ್ತೆ ದುರಸ್ತಿ ಕೈಗೊಳ್ಳದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ. ಮಳೆ ಹೆಚ್ಚಾಗುವ ಮೊದಲು ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಸಂಭವಿಸಬಹುದಾದ ಅನಾಹುತಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯೇ ನೇರ ಹೊಣೆ ಎಂದು ಸಾಣೂರು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ಮಾಧ್ಯಮಗಳ ಮೂಲಕ ಎಚ್ಚರಿಕೆ ನೀಡಿದ್ದಾರೆ.




