
ಬೆಂಗಳೂರು : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ನಿರಂತರವಾಗಿ ಇಳಿಮುಖವಾಗುತ್ತಿರುವ ಕುರಿತು UDISE+ ವರದಿ ಬಹಿರಂಗವಾಗಿರುವ ಬೆನ್ನಲ್ಲೇ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಆಸರೆಯಾಗಿದ್ದ ಸಾವಿರಾರು ಸರ್ಕಾರಿ ಶಾಲೆಗಳನ್ನು ಮುಚ್ಚುವ ಸ್ಥಿತಿಗೆ ತರುವ ಮೂಲಕ ಕಾಂಗ್ರೆಸ್ ಸರ್ಕಾರ ಆಡಳಿತಾತ್ಮಕ ದಿವಾಳಿತನ ಪ್ರದರ್ಶಿಸಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಒಳಜಗಳ, ಕುರ್ಚಿ ಕಿತ್ತಾಟ ಹಾಗೂ ಅಧಿಕಾರದ ರಾಜಕಾರಣದಲ್ಲೇ ತೊಡಗಿಕೊಂಡಿದ್ದು, ಆಡಳಿತಯಂತ್ರ ಸಂಪೂರ್ಣ ಸ್ತಬ್ಧಗೊಂಡ ಪರಿಣಾಮ ಶಿಕ್ಷಣ ಕ್ಷೇತ್ರದ ಮೇಲೂ ದುಷ್ಪರಿಣಾಮ ಬೀರಿದೆ ಎಂದು ದೂರಿದ್ದಾರೆ. UDISE+ ವರದಿಯ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ ಸರ್ಕಾರಿ ಶಾಲೆಗಳಿಂದ 2.12 ಲಕ್ಷಕ್ಕೂ ಹೆಚ್ಚು ಮಕ್ಕಳು ಹೊರನಡೆದಿರುವುದು ಸರ್ಕಾರದ ನಿಷ್ಕ್ರಿಯತೆಗೆ ಕೈಗನ್ನಡಿಯಾಗಿದೆ ಎಂದು ಟೀಕಿಸಿದ್ದಾರೆ.
2023–24ನೇ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆಗಳಲ್ಲಿ 1,19,26,303 ವಿದ್ಯಾರ್ಥಿಗಳ ದಾಖಲಾತಿ ಇದ್ದರೆ, 2024–25ರಲ್ಲಿ ಅದು 1,17,80,251ಕ್ಕೆ ಇಳಿದು 1,46,052 ವಿದ್ಯಾರ್ಥಿಗಳ ಕುಸಿತ ದಾಖಲಾಗಿತ್ತು. 2025–26ರಲ್ಲಿ ಮತ್ತಷ್ಟು 66,037 ವಿದ್ಯಾರ್ಥಿಗಳು ಕಡಿಮೆಯಾಗಿದ್ದು, ಒಟ್ಟು ದಾಖಲಾತಿ 1,17,14,214ಕ್ಕೆ ತಲುಪಿದೆ ಎಂದು ಅಂಕಿ-ಅಂಶಗಳನ್ನು ಉಲ್ಲೇಖಿಸಿದ್ದಾರೆ.
ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ ಬಲಪಡಿಸಬೇಕಾದ ಸರ್ಕಾರ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದ ಅವರು, ಒಂದೆಡೆ ಸರ್ಕಾರಿ ಶಾಲೆಗಳು ಮೂಲಭೂತ ಸೌಕರ್ಯಗಳ ಕೊರತೆಯಿಂದ ಸೊರಗುತ್ತಿದ್ದರೆ, ಮತ್ತೊಂದೆಡೆ ಕರ್ನಾಟಕ ಡ್ರಗ್ಸ್ ಹಬ್ ಆಗಿ ಮಾರ್ಪಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ. ಅಮಾಯಕ ಯುವ ಪೀಳಿಗೆ ಡ್ರಗ್ಸ್ ಜಾಲ ಹಾಗೂ ಸಮಾಜವಿರೋಧಿ ಚಟುವಟಿಕೆಗಳತ್ತ ಮುಖ ಮಾಡುತ್ತಿರುವ ಸಂದರ್ಭದಲ್ಲೂ ಸಮಾಜದ ಹಾಗೂ ವಿದ್ಯಾರ್ಥಿಗಳ ಹಿತ ಕಾಪಾಡಬೇಕಾದ ಸರ್ಕಾರ ಅದನ್ನೆಲ್ಲ ಮರೆತು ಒಳಜಗಳ, ಕುರ್ಚಿ ಕಿತ್ತಾಟ ಮತ್ತು ಅಧಿಕಾರದ ಅಮಲಿನಲ್ಲಿ ಮುಳುಗಿದೆ ಎಂದು ಪ್ರಲ್ಹಾದ ಜೋಶಿ ಕಿಡಿಕಾರಿದ್ದಾರೆ.




