
ಬೆಂಗಳೂರು : ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಶಾಶ್ವತ ವಸತಿ ಪ್ರಮಾಣಪತ್ರ (PRC)–2026 ನಿಯಮಾವಳಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ನಿಯಮಾವಳಿಗಳು ಸಂವಿಧಾನ ವಿರೋಧಿಯಾಗಿದ್ದು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಸಾಧ್ಯತೆಯಿದೆ ಎಂದು ಆರೋಪಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ತಕ್ಷಣ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರ ಯಾವುದೇ ಸಾಂವಿಧಾನಿಕ ಅಥವಾ ಶಾಸನಬದ್ಧ ಅಧಿಕಾರವಿಲ್ಲದೆ ‘ಶಾಶ್ವತ ನಿವಾಸಿಗಳು’ ಎಂಬ ಪ್ರತ್ಯೇಕ ವರ್ಗವನ್ನು ಸೃಷ್ಟಿಸಲು ಮುಂದಾಗಿರುವುದು ಭಾರತದ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದ್ದು, ದೇಶದಲ್ಲಿ ಏಕ ಪೌರತ್ವದ ತತ್ವಕ್ಕೆ ಧಕ್ಕೆ ತರುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸಂವಿಧಾನದ 14ನೇ ವಿಧಿಯ ಸಮಾನತೆಯ ಹಕ್ಕಿನ ನೇರ ಉಲ್ಲಂಘನೆಯಾಗಿರುವ ಈ ಕ್ರಮ ಕಾನೂನುಬಾಹಿರವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಸ್ಥಳೀಯ ಕಂದಾಯ ಅಧಿಕಾರಿಗಳ ಪರಿಶೀಲನೆ ಮತ್ತು ಸ್ಥಳೀಯ ದಾಖಲೆಗಳ ಆಧಾರದ ಮೇಲೆ ಪ್ರಮಾಣಪತ್ರ ನೀಡಲು ಅವಕಾಶ ಕಲ್ಪಿಸಲಾಗಿದ್ದು, ಭಾರತೀಯ ಪೌರತ್ವವನ್ನು ಕೇಂದ್ರ ಏಜೆನ್ಸಿಗಳ ಮೂಲಕ ಕಡ್ಡಾಯವಾಗಿ ಪರಿಶೀಲಿಸುವ ವ್ಯವಸ್ಥೆ ಇಲ್ಲದಿರುವುದು ಗಂಭೀರ ಆತಂಕಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ. ಇದರಿಂದ ಅಕ್ರಮವಾಗಿ ದೇಶ ಪ್ರವೇಶಿಸಿರುವ ವಿದೇಶಿ ಪ್ರಜೆಗಳು ಅಥವಾ ಅಕ್ರಮ ವಲಸಿಗರು ನಕಲಿ ದಾಖಲೆಗಳ ಮೂಲಕ ಶಾಶ್ವತ ವಸತಿ ಪ್ರಮಾಣಪತ್ರ ಪಡೆದು ಸರ್ಕಾರದ ಸವಲತ್ತುಗಳು, ಶೈಕ್ಷಣಿಕ ಪ್ರವೇಶ ಹಾಗೂ ಉದ್ಯೋಗಾವಕಾಶಗಳನ್ನು ಪಡೆಯುವ ಸಾಧ್ಯತೆ ಇದೆ. ಇದು ಅಕ್ರಮ ವಲಸಿಗರನ್ನು ಪತ್ತೆಹಚ್ಚಿ ಹೊರಹಾಕುವ ಕೇಂದ್ರ ಸರ್ಕಾರದ ಪ್ರಯತ್ನಗಳಿಗೆ ಹಿನ್ನಡೆಯಾಗಲಿದೆ ಹಾಗೂ ದೇಶದ ಆಂತರಿಕ ಭದ್ರತೆಗೆ ಅಪಾಯ ಉಂಟುಮಾಡಲಿದೆ ಎಂದು ಶೋಭಾ ಕರಂದ್ಲಾಜೆ ಕಳವಳ ವ್ಯಕ್ತಪಡಿಸಿದ್ದಾರೆ. ಪೌರತ್ವ, ವಲಸೆ ಮತ್ತು ದೇಶದ ಆಂತರಿಕ ಭದ್ರತೆ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ವಿಷಯಗಳಾಗಿರುವುದರಿಂದ, ಕರ್ನಾಟಕದ ಶಾಶ್ವತ ವಸತಿ ಪ್ರಮಾಣಪತ್ರ (PRC) ಆದೇಶದ ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲಿಸಬೇಕು, ಪರಿಶೀಲನೆ ಪೂರ್ಣಗೊಳ್ಳುವವರೆಗೆ ಅಧಿಸೂಚನೆಯ ಅನುಷ್ಠಾನಕ್ಕೆ ತಕ್ಷಣ ತಡೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು, ಯಾವ ಅಧಿಕಾರದ ಅಡಿಯಲ್ಲಿ ಈ ನಿಯಮ ಜಾರಿಗೊಳಿಸಲಾಗಿದೆ ಎಂಬ ಕುರಿತು ರಾಜ್ಯ ಸರ್ಕಾರದಿಂದ ವರದಿ ಪಡೆಯಬೇಕು ಹಾಗೂ ಕೇಂದ್ರ ಏಜೆನ್ಸಿಗಳಿಂದ ಪೌರತ್ವ ಪರಿಶೀಲನೆ ಆಗದ ಹೊರತು ಯಾವುದೇ ಪ್ರಮಾಣಪತ್ರ ವಿತರಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.




