
ಬೆಂಗಳೂರು : ನಗರದಲ್ಲಿ ದಿನದಿಂದ ದಿನಕ್ಕೆ ಎಲೆಕ್ಟ್ರಿಕ್ ಆಟೋರಿಕ್ಷಾಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇನ್ಮುಂದೆ ಎಲೆಕ್ಟ್ರಿಕ್ ಆಟೋಗಳಿಗೂ ಪರ್ಮಿಟ್ ಕಡ್ಡಾಯಗೊಳಿಸಿ ಸಾರಿಗೆ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಈ ಹಿಂದೆ ಸಿಎನ್ಜಿ, ಎಲ್ಪಿಜಿ ಹಾಗೂ ಪೆಟ್ರೋಲ್ ಆಟೋಗಳಿಗೆ ಮಾತ್ರ ಪರ್ಮಿಟ್ ಕಡ್ಡಾಯವಾಗಿದ್ದರೆ, ಇನ್ನು ಮುಂದೆ ಎಲೆಕ್ಟ್ರಿಕ್ ಆಟೋಗಳಿಗೂ ಇದೇ ನಿಯಮ ಅನ್ವಯವಾಗಲಿದೆ. ಹೊಸ ನಿಯಮದ ಪ್ರಕಾರ ಎಲೆಕ್ಟ್ರಿಕ್ ಆಟೋ ಖರೀದಿಸಲು ಚಾಲನಾ ಪರವಾನಗಿ (ಡಿಎಲ್) ಹಾಗೂ ಆಟೋ ಪರ್ಮಿಟ್ ಕಡ್ಡಾಯವಾಗಿದ್ದು, ಇವೆರಡೂ ಇಲ್ಲದಿದ್ದರೆ ಹೊಸ ಇವಿ ಆಟೋ ಖರೀದಿಸಲು ಸಾಧ್ಯವಾಗುವುದಿಲ್ಲ. ಸಾರ್ವಜನಿಕರ ಸುರಕ್ಷತೆ ಹಾಗೂ ಅಪಘಾತದ ಸಂದರ್ಭದಲ್ಲಿ ಪ್ರಯಾಣಿಕರು ಮತ್ತು ಚಾಲಕರಿಗೆ ವಿಮಾ ಪರಿಹಾರ ದೊರೆಯುವಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ. ಪರ್ಮಿಟ್ ಇಲ್ಲದ ಆಟೋ ಅಪಘಾತಕ್ಕೀಡಾದರೆ ಇನ್ಶುರೆನ್ಸ್ ಕಂಪನಿಗಳಿಂದ ಯಾವುದೇ ಪರಿಹಾರ ದೊರೆಯುವುದಿಲ್ಲ ಎಂಬ ಕಾರಣದಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ಇಲಾಖೆ ತಿಳಿಸಿದೆ. ಸಾಮಾನ್ಯ ಆಟೋಗಳಿಗೆ ಪರ್ಮಿಟ್ ಪಡೆಯಲು ₹500 ಶುಲ್ಕ ವಿಧಿಸಲಾಗುತ್ತದೆಯಾದರೂ, ಪರಿಸರ ಸ್ನೇಹಿ ವಾಹನಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಎಲೆಕ್ಟ್ರಿಕ್ ಆಟೋಗಳಿಗೆ ಉಚಿತವಾಗಿ ಪರ್ಮಿಟ್ ನೀಡಲು ಸಾರಿಗೆ ಇಲಾಖೆ ಮುಂದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕೆಲವು ಎಲೆಕ್ಟ್ರಿಕ್ ಆಟೋ ಶೋರೂಮ್ಗಳು ವ್ಯಾಪಾರ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ‘ಇವಿ ಆಟೋಗಳಿಗೆ ಪರ್ಮಿಟ್ ಅಗತ್ಯವಿಲ್ಲ’ ಎಂಬ ತಪ್ಪು ಮಾಹಿತಿ ನೀಡಿ ಸಾವಿರಾರು ವಾಹನಗಳನ್ನು ಮಾರಾಟ ಮಾಡಿದ್ದವು. ಬೆಂಗಳೂರಿನಲ್ಲಿ ಈಗಾಗಲೇ ಸುಮಾರು ಮೂರು ಲಕ್ಷಕ್ಕೂ ಅಧಿಕ ಸಿಎನ್ಜಿ ಹಾಗೂ ಎಲ್ಪಿಜಿ ಆಟೋಗಳು ಪರ್ಮಿಟ್ ಹೊಂದಿದ್ದು, ಎಲೆಕ್ಟ್ರಿಕ್ ಆಟೋಗಳು ಮಾತ್ರ ಪರ್ಮಿಟ್ ಇಲ್ಲದೆ ಸಂಚರಿಸುತ್ತಿದ್ದವು. ಈ ಪರಿಸ್ಥಿತಿಯ ಲಾಭ ಪಡೆದ ಕೆಲವು ಆ್ಯಪ್ ಆಧಾರಿತ ಅಗ್ರಿಗೇಟರ್ ಕಂಪನಿಗಳು ಪರ್ಮಿಟ್ ನಿಯಮಗಳಿಲ್ಲದ ಕಾರಣ ಸಾವಿರಾರು ಎಲೆಕ್ಟ್ರಿಕ್ ಆಟೋಗಳನ್ನು ಖರೀದಿಸಿ, ಹೊರರಾಜ್ಯದ ಚಾಲಕರನ್ನು ಕರೆತಂದು ಬೆಂಗಳೂರಿನಲ್ಲಿ ಓಡಿಸಲು ಅವಕಾಶ ನೀಡಿದ್ದವು. ಇದರಿಂದ ಸ್ಥಳೀಯ ಕನ್ನಡಿಗ ಆಟೋ ಚಾಲಕರ ಜೀವನೋಪಾಯಕ್ಕೆ ಧಕ್ಕೆ ಉಂಟಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಇದೀಗ ಎಲೆಕ್ಟ್ರಿಕ್ ಆಟೋಗಳಿಗೂ ಪರ್ಮಿಟ್ ಕಡ್ಡಾಯಗೊಳಿಸಿರುವುದರಿಂದ ಕಾರ್ಪೊರೇಟ್ ಅಕ್ರಮಗಳಿಗೆ ಕಡಿವಾಣ ಬೀಳುವ ಜೊತೆಗೆ ಹೊರರಾಜ್ಯದ ಚಾಲಕರ ಅನಧಿಕೃತ ಹಾವಳಿಗೂ ತಡೆ ಬೀಳಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.




