
ರಾಜ್ಯದಲ್ಲಿ ಮುಂಗಾರು ಮಳೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಿಗೆ ಭಾರೀ ಮಳೆಯ ಮುನ್ಸೂಚನೆ ನೀಡಿದ್ದು, ಮುಂಜಾಗ್ರತಾ ಕ್ರಮವಾಗಿ ಇಂದು (ಜು.7) ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ, ಕಳಸ, ಶಿರಸಿ, ಸಿದ್ದಾಪುರ, ಯಲ್ಲಾಪುರ, ಜೋಯಿಡಾ, ದಾಂಡೇಲಿ, ತೀರ್ಥಹಳ್ಳಿ, ಹೊಸನಗರ, ಬೆಳಗಾವಿ ಹಾಗೂ ಖಾನಾಪುರ ಸೇರಿ 14 ತಾಲೂಕುಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಜೊತೆಗೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಶಾಲೆಗಳಿಗೂ ರಜೆ ನೀಡಲಾಗಿದೆ. ಭಾರೀ ಮಳೆಯಿಂದ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಬೆಳಗಾವಿ ಭಾಗದಲ್ಲಿ ಹಲವು ಕೆಳಹಂತದ ಸೇತುವೆಗಳು ಜಲಾವೃತವಾಗಿವೆ. ಆಗುಂಬೆ ಸಮೀಪ ಪ್ರವಾಹದಲ್ಲಿ ವೃದ್ಧರೊಬ್ಬರು ಕೊಚ್ಚಿಹೋಗಿದ್ದು, ಚಿಕ್ಕಮಗಳೂರು, ಕೊಡಗು ಹಾಗೂ ಉಡುಪಿಯಲ್ಲಿ ಮಳೆಯಿಂದ ಅನಾಹುತಗಳು ಸಂಭವಿಸಿವೆ. ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ರೆಡ್ ಅಲರ್ಟ್, ದಕ್ಷಿಣ ಕನ್ನಡ, ಬೆಳಗಾವಿ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.




