
ನವದೆಹಲಿ: ರಾಷ್ಟ್ರೀಯ ವೈದ್ಯಕೀಯ ವಿಜ್ಞಾನಗಳ ಪರೀಕ್ಷಾ ಮಂಡಳಿ (NBEMS) ಗ್ರೂಪ್ ‘ಬಿ’ ಮತ್ತು ‘ಸಿ’ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಆನ್ಲೈನ್ ಅರ್ಜಿ ಸಲ್ಲಿಕೆ ದಿನಾಂಕವನ್ನು ಆಡಳಿತಾತ್ಮಕ ಕಾರಣಗಳಿಂದ ಪರಿಷ್ಕರಿಸಿದ್ದು, ಹೊಸ ವೇಳಾಪಟ್ಟಿಯಂತೆ ಜುಲೈ 7ರಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಿ ಜುಲೈ 31ರವರೆಗೆ ನಡೆಯಲಿದೆ. ಈ ನೇಮಕಾತಿ ಅಭಿಯಾನದಡಿ ಒಟ್ಟು 53 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, 39 ಜೂನಿಯರ್ ಅಸಿಸ್ಟೆಂಟ್, 7 ಸ್ಟೆನೋಗ್ರಾಫರ್, 4 ಜೂನಿಯರ್ ಅಕೌಂಟೆಂಟ್, 2 ಡೆಪ್ಯುಟಿ ಡೈರೆಕ್ಟರ್ (ಮೆಡಿಕಲ್) ಹಾಗೂ 1 ಜೂನಿಯರ್ ಪ್ರೋಗ್ರಾಮರ್ ಹುದ್ದೆಗಳಿವೆ. ಡೆಪ್ಯುಟಿ ಡೈರೆಕ್ಟರ್ ಹುದ್ದೆಗೆ ಸ್ನಾತಕೋತ್ತರ ವೈದ್ಯಕೀಯ ಪದವಿ ಹಾಗೂ ಗರಿಷ್ಠ 35 ವರ್ಷ ವಯೋಮಿತಿ, ಜೂನಿಯರ್ ಪ್ರೋಗ್ರಾಮರ್ ಹುದ್ದೆಗೆ ಬಿ.ಇ., ಬಿ.ಟೆಕ್., ಬಿಸಿಎ ಅಥವಾ ಕಂಪ್ಯೂಟರ್ ಸೈನ್ಸ್, ಐಟಿ, ಎಲೆಕ್ಟ್ರಾನಿಕ್ಸ್ ವಿಷಯಗಳಲ್ಲಿ ಪದವಿ, ಜೂನಿಯರ್ ಅಕೌಂಟೆಂಟ್ ಹುದ್ದೆಗೆ ಗಣಿತ, ಅಂಕಿಅಂಶಶಾಸ್ತ್ರ ಅಥವಾ ವಾಣಿಜ್ಯ ವಿಷಯದಲ್ಲಿ ಪದವಿ, ಸ್ಟೆನೋಗ್ರಾಫರ್ ಮತ್ತು ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ 12ನೇ ತರಗತಿ ಉತ್ತೀರ್ಣರಾಗಿ ಕಂಪ್ಯೂಟರ್ ಜ್ಞಾನ ಹಾಗೂ ಸಂಬಂಧಿತ ಕೌಶಲ್ಯ ಹೊಂದಿರಬೇಕು. ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳು ₹1,500 ಅರ್ಜಿ ಶುಲ್ಕದ ಜೊತೆಗೆ ಶೇ.18ರಷ್ಟು ಜಿಎಸ್ಟಿ ಪಾವತಿಸಬೇಕಿದ್ದು, ಎಸ್ಸಿ, ಎಸ್ಟಿ, ದಿವ್ಯಾಂಗ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಯಾವುದೇ ಹುದ್ದೆಗೆ ಸಂದರ್ಶನ ಇರುವುದಿಲ್ಲ; ಅಭ್ಯರ್ಥಿಗಳನ್ನು ಮೊದಲು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)ಗೆ ಒಳಪಡಿಸಿ, ಬಳಿಕ ಹುದ್ದೆಗೆ ಅನುಗುಣವಾಗಿ ಸ್ಕಿಲ್ ಟೆಸ್ಟ್ ಅಥವಾ ಕಂಪ್ಯೂಟರ್ ಪ್ರಾವೀಣ್ಯ ಪರೀಕ್ಷೆ ನಡೆಸಿ ಅಂತಿಮ ಆಯ್ಕೆ ಮಾಡಲಾಗುತ್ತದೆ. ಪರೀಕ್ಷೆಯ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು NBEMS ಅಧಿಕೃತ ವೆಬ್ಸೈಟ್ನಲ್ಲಿ ನೋಂದಣಿ ಮಾಡಿಕೊಂಡು, ಅರ್ಜಿ ನಮೂನೆ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ, ನಿಗದಿತ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ ಅರ್ಜಿ ಸಲ್ಲಿಸಬೇಕು. ಅಂತಿಮ ಸಬ್ಮಿಷನ್ ಮಾಡುವ ಮೊದಲು ಎಲ್ಲಾ ಮಾಹಿತಿಯನ್ನು ಪರಿಶೀಲಿಸಿಕೊಳ್ಳುವುದು ಅಗತ್ಯವಾಗಿದ್ದು, ಒಮ್ಮೆ ಅರ್ಜಿ ಸಲ್ಲಿಸಿದ ಬಳಿಕ ಯಾವುದೇ ತಿದ್ದುಪಡಿ ಮಾಡಲು ಅವಕಾಶ ಇರುವುದಿಲ್ಲ ಎಂದು ಮಂಡಳಿ ತಿಳಿಸಿದೆ.




