
ಕಾರ್ಕಳ : ತಾಲೂಕಿನ ಮರ್ಣೇ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಜೆಕಾರು ಪಂಚಾಯತ್ ಸಭಾಭವನದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಸ್ವಾವಲಂಬನೆಗಾಗಿ ಉಚಿತ ಸ್ವ-ಉದ್ಯೋಗ ತರಬೇತಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.
ಈ ತರಬೇತಿ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರೂಡ್ಶೆಡ್ ಸಂಸ್ಥೆ ಹಾಗೂ ಕೆನರಾ ಬ್ಯಾಂಕ್ ಸಹಯೋಗದಲ್ಲಿ ಆಯೋಜಿಸಲಾಗಿದ್ದು, ಮರ್ಣೇ ಗ್ರಾಮ ಪಂಚಾಯತ್ ಅಜೆಕಾರು ಇವರ ವಿನಂತಿಯ ಮೇರೆಗೆ ಹಮ್ಮಿಕೊಳ್ಳಲಾಗಿದೆ.
18 ರಿಂದ 50 ವರ್ಷದ ಮಹಿಳೆಯರಿಗಾಗಿ ಆಯೋಜಿಸಲಾದ ಈ 14 ದಿನಗಳ ತರಬೇತಿಯಲ್ಲಿ ಕೃತಕ ಆಭರಣಗಳ ತಯಾರಿಕೆ, ಸೌಂದರ್ಯವರ್ಧಕ ಸೇವೆಗಳು, ಕೇಶ ವಿನ್ಯಾಸ, ಕೇಶಾಲಂಕಾರ, ಸೀರೆ ಉಡಿಸುವ ಕಲೆ ಸೇರಿದಂತೆ ವಿವಿಧ ಸ್ವ-ಉದ್ಯೋಗ ಕೌಶಲ್ಯಗಳ ಬಗ್ಗೆ ಸಮಗ್ರ ತರಬೇತಿ ನೀಡಲಾಗುತ್ತಿದೆ. ತರಬೇತಿಯಲ್ಲಿ ಸುಮಾರು 35 ಮಂದಿ ಮಹಿಳಾ ಶಿಬಿರಾರ್ಥಿಗಳು ಭಾಗವಹಿಸಿದ್ದು, ಹೊಸ ಕೌಶಲ್ಯಗಳನ್ನು ಕಲಿತು ಸ್ವಂತ ಉದ್ಯೋಗ ಆರಂಭಿಸುವ ಕುರಿತು ಮಾಹಿತಿ ಹಾಗೂ ಮಾರ್ಗದರ್ಶನ ಪಡೆದುಕೊಳ್ಳುತ್ತಿದ್ದಾರೆ.
ಮಹಿಳೆಯರ ಆತ್ಮವಿಶ್ವಾಸ ವೃದ್ಧಿ, ಆರ್ಥಿಕ ಸ್ವಾವಲಂಬನೆ ಹಾಗೂ ಕುಟುಂಬದ ಆದಾಯ ಹೆಚ್ಚಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮವು ಭಾಗವಹಿಸಿದ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಗ್ರಾಮೀಣ ಮಹಿಳೆಯರ ಸಬಲೀಕರಣದತ್ತ ಮಹತ್ವದ ಹೆಜ್ಜೆಯಾಗಿದೆ. ಮಹಿಳೆಯರು ಸ್ವಂತ ಉದ್ಯೋಗ ಆರಂಭಿಸಿ ಆರ್ಥಿಕವಾಗಿ ಸದೃಢರಾಗಲು ಈ ತರಬೇತಿ ನೆರವಾಗಲಿದ್ದು, ಗ್ರಾಮೀಣ ಭಾಗದ ಮಹಿಳೆಯರಲ್ಲಿ ಉದ್ಯಮಶೀಲತೆ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಈ ಮೂಲಕ ಮಹಿಳೆಯರ ಜೀವನಮಟ್ಟ ಸುಧಾರಣೆಗೆ ಹಾಗೂ ಕುಟುಂಬದ ಅಭಿವೃದ್ಧಿಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ.




