
ಚಿಕ್ಕಮಗಳೂರು: ಕಡೂರು ತಾಲೂಕಿನ ಬಿಸ್ಲೆರೆ ಗ್ರಾಮದಲ್ಲಿ ಶಾಲೆಯ ಶಿಕ್ಷಕನೊಬ್ಬ ಮೂವರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದ್ದು, ಪ್ರಕರಣ ಗ್ರಾಮದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪದ ಪ್ರಕಾರ ಶಿಕ್ಷಕನು ಬಾಲಕಿಯರಿಗೆ ಅಶ್ಲೀಲ ವಿಡಿಯೋಗಳನ್ನು ತೋರಿಸಿ ವಿಚಿತ್ರ ಪ್ರಶ್ನೆಗಳನ್ನು ಕೇಳಿದ್ದಾನೆ ಎನ್ನಲಾಗಿದೆ. ಘಟನೆ ಬೆಳಕಿಗೆ ಬಂದ ಬಳಿಕ ಗ್ರಾಮಸ್ಥರು ಶಿಕ್ಷಕನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಸಂಬಂಧ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ, ಬಿಇಒ, ಪೊಲೀಸ್ ಅಧಿಕಾರಿಗಳು ಹಾಗೂ ಎಸ್ಡಿಎಂಸಿ ಸದಸ್ಯರ ಸಮ್ಮುಖದಲ್ಲಿ ಸಭೆ ನಡೆದಿದ್ದು, ಪ್ರಕರಣದ ಕುರಿತು ಚರ್ಚೆ ನಡೆಸಲಾಗಿದೆ. ಆದರೆ ಕೆಲವರು ಕಾನೂನು ಕ್ರಮಕ್ಕೆ ಮುಂದಾಗದೆ ಸ್ಥಳೀಯ ಮಟ್ಟದಲ್ಲೇ ಇತ್ಯರ್ಥ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದರೆಂಬ ಆರೋಪವೂ ಕೇಳಿಬಂದಿದೆ. ಇದೇ ವೇಳೆ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ತಿಪ್ಪೇಶ್ ಎಂಬುವರ ಮೇಲೆ ನಂದೀಶ್ ಎಂಬಾತ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದ್ದು, ಗಾಯಗೊಂಡ ತಿಪ್ಪೇಶ್ ಕಡೂರು ತಾಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಯಗಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಘಟನೆ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



