
ಹೈದರಾಬಾದ್: ನೀಟ್-ಯುಜಿ 2026 ಮರು ಪರೀಕ್ಷೆಯಲ್ಲಿ ನಕಲು ಮಾಡಲು ವಿದ್ಯಾರ್ಥಿಯೊಬ್ಬ ರೂಪಿಸಿದ್ದ ಕುತಂತ್ರ ಬಯಲಾಗಿದ್ದು, ಪರೀಕ್ಷಾ ಕೇಂದ್ರದ ಶೌಚಾಲಯದ ಫ್ಲಶ್ ಟ್ಯಾಂಕ್ನಲ್ಲಿ ಮೊಬೈಲ್ ಅಡಗಿಸಿಟ್ಟಿದ್ದ 18 ವರ್ಷದ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೈದರಾಬಾದ್ನ ಆದಿಬಟ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ರಾಗಣ್ಣಗುಡದಲ್ಲಿರುವ ಜಿಲ್ಲಾ ಪರಿಷತ್ ಪ್ರೌಢಶಾಲೆ (ZPHS) ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿ ಬೆಳಿಗ್ಗೆ 7 ಗಂಟೆ ವೇಳೆಗೆ ಪರೀಕ್ಷಾ ಕೇಂದ್ರಕ್ಕೆ ಬಂದು ಕಾಂಪೌಂಡ್ ಗೋಡೆಯ ವೆಂಟಿಲೇಟರ್ ಮೂಲಕ ಮೊಬೈಲ್ ಫೋನ್ನ್ನು ಶೌಚಾಲಯದ ಬಳಿ ತಲುಪಿಸಿದ್ದಾನೆ. ಬಳಿಕ ಪರೀಕ್ಷೆ ಆರಂಭಕ್ಕೂ ಮುನ್ನ ಫೋನ್ಗೆ ನೀರು ತಗುಲದಂತೆ ಜಿಪ್-ಲಾಕ್ ಕವರ್ನಲ್ಲಿ ಹಾಕಿ ಫ್ಲಶ್ ಟ್ಯಾಂಕ್ ಒಳಗೆ ಅಡಗಿಸಿಟ್ಟಿದ್ದಾನೆ. ಪರೀಕ್ಷೆ ಆರಂಭವಾದ ಕೆಲ ಸಮಯದ ಬಳಿಕ ಹೊಟ್ಟೆ ನೋವು ಎಂದು ನೆಪ ಹೇಳಿ ಶೌಚಾಲಯಕ್ಕೆ ತೆರಳಿದ್ದ ವಿದ್ಯಾರ್ಥಿ, ಅಲ್ಲಿಂದ ಹೊರಬರಲು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಅನುಮಾನಗೊಂಡ ಮೇಲ್ವಿಚಾರಕರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ವಿದ್ಯಾರ್ಥಿ ಫ್ಲಶ್ ಟ್ಯಾಂಕ್ನಿಂದ ಮೊಬೈಲ್ ತೆಗೆದು ಗೂಗಲ್ ಕ್ರೋಮ್ ಮೂಲಕ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿರುವುದು ಪತ್ತೆಯಾಗಿದೆ. ತಕ್ಷಣ ಪೊಲೀಸರು ಮೊಬೈಲ್ ವಶಪಡಿಸಿಕೊಂಡು ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ ವಿದ್ಯಾರ್ಥಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಶಾಲಾ ಮಂಡಳಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯದ ವಿಧಾನಗಳ ತಡೆಗಟ್ಟುವಿಕೆ) ಕಾಯ್ದೆ-2024 ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 318(4) ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗಿದೆ. ಇಷ್ಟು ಬಿಗಿ ಭದ್ರತೆ, ಸಿಸಿಟಿವಿ ಕಣ್ಗಾವಲು ಮತ್ತು ಬಹು ಹಂತದ ತಪಾಸಣೆಗಳ ನಡುವೆಯೂ ವಿದ್ಯಾರ್ಥಿ ನಕಲು ಮಾಡಲು ರೂಪಿಸಿದ್ದ ಈ ಕುತಂತ್ರ ಪರೀಕ್ಷಾ ಅಧಿಕಾರಿಗಳನ್ನೇ ಬೆಚ್ಚಿಬೀಳಿಸಿದೆ.




