
ಸೊರಬ: ತಾಲೂಕಿನ ಜಡೆ ಗ್ರಾಮದಲ್ಲಿರುವ ಐತಿಹಾಸಿಕ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ರಂಗನಾಥಸ್ವಾಮಿ ಹಾಗೂ ವಿಶ್ವೇಶ್ವರ ಸ್ವಾಮಿ ದೇವರ ಪುನಃಪ್ರತಿಷ್ಠಾಪನೆ, ಬ್ರಹ್ಮಕಲಶಾರೋಹಣ ಮತ್ತು ಕುಂಭಾಭಿಷೇಕ ಮಹೋತ್ಸವವು ಇಂದು ಅತ್ಯಂತ ವೈಭವಯುತವಾಗಿ ಹಾಗೂ ಭಕ್ತಿಭಾವದಿಂದ ನೆರವೇರಿತು. ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಅಮೃತ ಹಸ್ತದಿಂದ ನಡೆದ ಮಹೋತ್ಸವದಲ್ಲಿ ವೈದಿಕ ಮಂತ್ರೋಚ್ಚಾರ, ಹೋಮ-ಹವನ, ಪೂರ್ಣಾಹುತಿ, ಕಲಶಾರಾಧನೆ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಮಹೋತ್ಸವದ ಪೂರ್ವಭಾವಿಯಾಗಿ ಭಾನುವಾರ ಜಗದ್ಗುರುಗಳು ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಬೆಳಗ್ಗಿನಿಂದಲೇ ಭಕ್ತರು ದೇವಾಲಯಕ್ಕೆ ಆಗಮಿಸಿ ಶ್ರೀ ರಂಗನಾಥಸ್ವಾಮಿ ಹಾಗೂ ವಿಶ್ವೇಶ್ವರ ಸ್ವಾಮಿ ದೇವರ ದರ್ಶನ ಪಡೆದು ಜಗದ್ಗುರುಗಳ ಆಶೀರ್ವಾದ ಪಡೆದರು. ನೆರೆದಿದ್ದ ಭಕ್ತರನ್ನು ಉದ್ದೇಶಿಸಿ ಅನುಗ್ರಹ ಭಾಷಣ ಮಾಡಿದ್ದು, ತಮ್ಮ ಆಶೀರ್ವಚನದಲ್ಲಿ ಧರ್ಮದ ಮೌಲ್ಯಗಳು, ಸಂಸ್ಕಾರ ಹಾಗೂ ಧಾರ್ಮಿಕ ಆಚರಣೆಗಳ ಮಹತ್ವವನ್ನು ವಿವರಿಸಿದರು. ರಾಜ್ಯದ ವಿವಿಧ ಭಾಗಗಳಿಂದ ಬಂದ ಭಕ್ತರು, ಗಣ್ಯರು ಹಾಗೂ ಧರ್ಮಾಭಿಮಾನಿಗಳು ಮಹೋತ್ಸವದಲ್ಲಿ ಭಾಗವಹಿಸಿದ್ದು, ದೇವಾಲಯದ ಆವರಣ ಭಕ್ತರಿಂದ ಕಿಕ್ಕಿರಿದು ತುಂಬಿ ಹಬ್ಬದ ಸಂಭ್ರಮ ಮನೆಮಾಡಿತ್ತು. ಭಕ್ತಿ, ಶ್ರದ್ಧೆ ಹಾಗೂ ಧಾರ್ಮಿಕ ಪರಂಪರೆಯ ಸಮ್ಮಿಲನವಾಗಿ ನಡೆದ ಈ ಮಹೋತ್ಸವವು ಯಶಸ್ವಿಯಾಗಿ ಸಂಪನ್ನಗೊಂಡಿತು.




