
ಬೆಂಗಳೂರು: ದೇಶದ ಐಟಿ ರಾಜಧಾನಿ ಎಂಬ ಹೆಗ್ಗಳಿಕೆ ಪಡೆದಿರುವ ಬೆಂಗಳೂರು ಇದೀಗ ವರದಕ್ಷಿಣೆ ಕಿರುಕುಳ ಪ್ರಕರಣಗಳಲ್ಲಿ ದೇಶದ ಮಹಾನಗರಗಳ ಪೈಕಿ ಅಗ್ರಸ್ಥಾನದಲ್ಲಿರುವುದು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (NCRB) ಬಿಡುಗಡೆ ಮಾಡಿರುವ ‘ಕ್ರೈಮ್ ಇನ್ ಇಂಡಿಯಾ 2024’ ವರದಿಯಲ್ಲಿ ಬಹಿರಂಗವಾಗಿದೆ.
ವರದಿಯ ಪ್ರಕಾರ, 2024ರಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ ಅಡಿಯಲ್ಲಿ ಬೆಂಗಳೂರಿನಲ್ಲಿ ಮಾತ್ರ 878 ಪ್ರಕರಣಗಳು ದಾಖಲಾಗಿದ್ದು, ದೇಶದ 19 ಮಹಾನಗರಗಳಲ್ಲಿ ದಾಖಲಾಗಿರುವ ಒಟ್ಟು 1,008 ವರದಕ್ಷಿಣೆ ಕಿರುಕುಳ ಪ್ರಕರಣಗಳ ಪೈಕಿ ಶೇ.87ರಷ್ಟು ಪ್ರಕರಣಗಳು ಬೆಂಗಳೂರಿನಲ್ಲಿಯೇ ದಾಖಲಾಗಿವೆ.
ಈ ಪಟ್ಟಿಯಲ್ಲಿ ಲಖನೌ ಕೇವಲ 48 ಪ್ರಕರಣಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ 2024ರಲ್ಲಿ 25 ವರದಕ್ಷಿಣೆ ಸಾವು ಪ್ರಕರಣಗಳೂ ದಾಖಲಾಗಿದ್ದು, ದೆಹಲಿಯಲ್ಲಿ 109, ಹೈದರಾಬಾದ್ನಲ್ಲಿ 14 ಪ್ರಕರಣಗಳು ದಾಖಲಾಗಿವೆ. ಚೆನ್ನೈ, ಕೊಚ್ಚಿ ಹಾಗೂ ಕೊಯಮತ್ತೂರು ನಗರಗಳಲ್ಲಿ ವರದಕ್ಷಿಣೆ ಸಾವು ಪ್ರಕರಣಗಳು ದಾಖಲಾಗಿಲ್ಲ.
ಮಹಿಳೆಯರ ವಿರುದ್ಧದ ಅಪರಾಧಗಳಲ್ಲೂ ಬೆಂಗಳೂರು ಮುಂಚೂಣಿಯಲ್ಲಿದ್ದು, ವಿಶೇಷ ಮತ್ತು ಸ್ಥಳೀಯ ಕಾನೂನುಗಳ ಅಡಿಯಲ್ಲಿ 1,051 ಪ್ರಕರಣಗಳು ದಾಖಲಾಗಿವೆ. ಮಹಿಳೆಯರ ಮಾನಕ್ಕೆ ಧಕ್ಕೆ ತರುವ ಉದ್ದೇಶದಿಂದ ಕ್ರಿಮಿನಲ್ ಫೋರ್ಸ್ ಬಳಸಿದ 897 ಪ್ರಕರಣಗಳು ಹಾಗೂ ಗಂಡ ಅಥವಾ ಅತ್ತೆ-ಮಾವಂದಿರ ಕ್ರೌರ್ಯಕ್ಕೆ ಸಂಬಂಧಿಸಿದ 619 ಪ್ರಕರಣಗಳು ದಾಖಲಾಗಿದ್ದು, ಸರಾಸರಿ ದಿನಕ್ಕೆ ಎರಡು ಪ್ರಕರಣಗಳು ದಾಖಲಾಗಿರುವುದು ಆತಂಕಕ್ಕೆ ಕಾರಣವಾಗಿದೆ.
NCRB ವರದಿ ಪ್ರಕಾರ ದೇಶದ 19 ಮಹಾನಗರಗಳಲ್ಲಿ ಒಟ್ಟು 8,40,905 ಅಪರಾಧ ಪ್ರಕರಣಗಳು ದಾಖಲಾಗಿದ್ದು,
* ಪತಿಯಿಂದ ಕ್ರೌರ್ಯ ಪ್ರಕರಣಗಳು -50,584,
* ಮಕ್ಕಳ ಮೇಲಿನ ಅಪರಾಧಗಳು -24,377
* ವರದಕ್ಷಿಣೆ ಮತ್ತು ಲೈಂಗಿಕ ಕಿರುಕುಳ ಪ್ರಕರಣ- 6237
ಸೈಬರ್ ಅಪರಾಧಗಳಲ್ಲೂ ಏರಿಕೆ ಕಂಡುಬಂದಿದ್ದು, ದೇಶಾದ್ಯಂತ
* ಸೈಬರ್ ಕ್ರೈಮ್ ಪ್ರಕರಣಗಳು-34,958
* ಆರ್ಥಿಕ ಅಪರಾಧಗಳು -42,747
* ಆಸ್ತಿ ಸಂಬಂಧಿತ ಅಪರಾಧಗಳು -2,80,867
ಹಿರಿಯ ನಾಗರಿಕರ ಮೇಲಿನ ಅಪರಾಧಗಳು -4,107 ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟು ಅಪರಾಧ ಪ್ರಕರಣಗಳಲ್ಲಿ ಶೇ.10ರಷ್ಟು ಏರಿಕೆ ಕಂಡುಬಂದಿದೆ ಎಂದು ವರದಿ ತಿಳಿಸಿದೆ.
ನಗರೀಕರಣ, ಆರ್ಥಿಕ ಒತ್ತಡ, ಬದಲಾಗುತ್ತಿರುವ ಜೀವನಶೈಲಿ ಹಾಗೂ ಸಾಮಾಜಿಕ ಮೌಲ್ಯಗಳ ಕುಸಿತ ಇಂತಹ ಅಪರಾಧಗಳ ಹೆಚ್ಚಳಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವರದಕ್ಷಿಣೆಯಂತಹ ಸಾಮಾಜಿಕ ಪಿಡುಗನ್ನು ತೊಡೆದುಹಾಕಲು ಕಠಿಣ ಕಾನೂನು ಜಾರಿ, ಜನಜಾಗೃತಿ ಹಾಗೂ ಸಮಾಜದ ಎಲ್ಲ ವರ್ಗಗಳ ಸಹಕಾರ ಅಗತ್ಯವಾಗಿದೆ ಎಂದು ವರದಿಯಲ್ಲಿ ಒತ್ತಿ ಹೇಳಲಾಗಿದೆ.





