
ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಅಪ್ರಾಪ್ತ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಸಮೀರ್ ಎಂಬಾತನನ್ನು ಶೃಂಗೇರಿ ಪೊಲೀಸರು ಬಂಧಿಸಿದ್ದಾರೆ. ಜೂನ್ 15ರಂದು ಸಂಜೆ 5ರಿಂದ 6 ಗಂಟೆಯ ನಡುವೆ ಶೃಂಗೇರಿ ಪಟ್ಟಣದ ಕುಷನ್ ಅಂಗಡಿ ಸಮೀಪ ಈ ಘಟನೆ ನಡೆದಿದ್ದು, ಮನೆ ಬಳಿ ಆಟವಾಡುತ್ತಿದ್ದ 11 ವರ್ಷದ ಬಾಲಕಿಯನ್ನು ಕರೆದು ಆಕೆಯ ಖಾಸಗಿ ಅಂಗವನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ವೇಳೆ ಬಾಲಕಿಯ ತಾಯಿ ಆಸ್ಪತ್ರೆಗೆ ತೆರಳಿದ್ದು, ಬಳಿಕ ಮನೆಗೆ ಬಂದಾಗ ನಡೆದ ವಿಷಯವನ್ನು ಬಾಲಕಿ ತಿಳಿಸಿದ್ದಾಳೆ. ಇದರಿಂದ ಆಕ್ರೋಶಗೊಂಡ ತಾಯಿ ಶೃಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ತಕ್ಷಣ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಹಿಂದೆಯೂ ಹತ್ತಿರದ ಮಹಿಳಾ ಪಿ.ಜಿ ಯಲ್ಲಿ ಇದ್ದಂತಹ ಯುವತಿಯರಿಗೂ ಕಿರುಕುಳ ನೀಡಿದ್ದಾನೆಂಬ ಆರೋಪವೂ ಇದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 75(1)(i), ಪೋಕ್ಸೋ ಕಾಯ್ದೆಯ ಸೆಕ್ಷನ್ 8 ಹಾಗೂ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಬಾಲಕಿ ತಾಯಿ ನೀಡಿದ ದೂರಿನನ್ವಯ ಕಾನೂನು ಕ್ರಮ ಜರುಗಿಸಲಾಗಿದ್ದು, ಘಟನೆ ಶೃಂಗೇರಿ ಪಟ್ಟಣದಲ್ಲಿ ಆತಂಕಕ್ಕೆ ಕಾರಣವಾಗಿದೆ.




