
ಹಾಗೆ ಸುಮ್ನೆ ಯೋಚಿಸುತ್ತಾ ಕುಳಿತಿದ್ದೆ, ಮನುಷ್ಯನಿಗೆ ತುಂಬಾ ನೋವು ಕೊಡೋ ಸಂಗತಿ ಯಾವುದು? ಅವಮಾನವಾ, ಆಸೆಯಾ, ಒಬ್ಬಂಟಿತನವಾ, ಸೋಲು, ನಿರೀಕ್ಷೆ..? ಇವುಗಳಲ್ಲಿ ಯಾವ ಸಂಗತಿ ನಮ್ಮನ್ನು ದುಃಖಕ್ಕೆ ತಳ್ಳುತ್ತದೆ..? ನನ್ನ ಪ್ರಕಾರ ಉಳಿದೆಲ್ಲಾ ಸಂಗತಿಗಳಿಗಿಂತ ನಿರೀಕ್ಷೆ.. ಎಸ್! ಎಕ್ಸ್ಪೆಕ್ಟೇಷನ್ ಹರ್ಟ್ಸ್ ಮೋರ್ ದೇನ್ ಅದರ್ಸ್ ನಿಮ್ಮನ್ನು ಯಾರಾದ್ರೂ ಅವಮಾನಿಸಿದ್ರೆ ನೀವು ರಿವೇಂಜಿಗೆ ಬೀಳಬಹುದು, ಅವಮಾನಿಸಿದವರೆದಿರು ಎದೆಯುಬ್ಬಿಸಿ ನಡೆದು ಡೋಂಟ್ಕೇರ್ ಅನ್ನಬಹುದು. ಇನ್ನು ಆಸೆಯಾ ಏನಾದರೂ ತಿನ್ನುವ ಆಸೆ, ಹೊಸ ಬೈಕು, ಕಾರು, ಮನೆ ಖರೀದಿಸುವ ಆಸೆ, ದೇಶ ವಿದೇಶಗಳನ್ನು ಸುತ್ತುವ ಆಸೆ, ಹೀಗೆ ನಾನಾ ರೀತಿಯ ಆಸೆ ದುರಾಸೆಗಳು ಮೂಡಿ ನಿಂತಾಗ ಕೆಲವನ್ನು ಈಡೇರಿಸಿಕೊಳ್ಳಬಹುದು. ಇಲ್ಲ ಅದೆಲ್ಲ ನಮ್ಮಂತೋರಿಗಲ್ಲ. ಬಿಡು ಅಂತ ವೈರಾಗ್ಯದ ಮಾತಾಡಿ ಸುಮ್ಮನಾಗಬಹುದು. ಹಾಗಾಗಿ ಆಸೆ ಎಂಬುದು ಹೆಚ್ಚಿನ ನೋವನ್ನು ಕೊಡುವುದಿಲ್ಲ. ಹಾಗಾದರೆ ಒಂಟಿತನವಾ, ಕೆಲವರಿಗೆ ನಾನು ಒಂಟಿಯಾಗಿದೀನಿ ಅನ್ನೋ ನೋವಿರಬಹುದು. ಹುಡುಗರಾದರೆ ಕುಡಿತ, ಸಿಗರೇಟು ಜೊತೆಗಿದ್ದು ಬಿಡಬಹುದು. ಹುಡುಗಿಯರಿಗೆ ಬಾತ್ರೂಮಿನೊಳಗೆ ಅತ್ತೋ, ದಿಂಬಿನೊಳಗೆ ಮುಖ ಮುಚ್ಚಿ ಬಿಕ್ಕಳಿಸಿಯೋ ಸಮಾಧಾನ ಮಾಡಿಕೊಂಡು ಬಿಡಬಹುದು. ಅಷ್ಟಕ್ಕೂ ಒಂಟಿತನ ಎಂಬುದು ಯಾರ ಬದುಕಿನಲ್ಲೂ ಖಾಯಂ ಗಿರಾಕಿಯಲ್ಲ! ಎಲ್ಲೋ ಆಗೊಮ್ಮೆ ಈಗೊಮ್ಮೆ ಬಂದು ಹೋಗೋ ಗೆಸ್ಟ್. ಅದರಲ್ಲೂ ಒಂಟಿತನವನ್ನು ಏಕಾಂತವನ್ನಾಗಿಸಿಕೊಳ್ಳುವ ಕಲೆ ಗೊತ್ತಿದ್ದವರಿಗೆ ಅದು ದಿವ್ಯಗಳಿಗೆಯಾಗಿ ಬಿಡುತ್ತದೆ. ಆ ಕಾರಣದಿಂದ ಒಂಟಿತನ ಹೆಚ್ಚು ಉಡದ್ರವಿ ಎನ್ನಲು ಸಾಧ್ಯವಿಲ್ಲ. ಸೋಲು..? ಊಹುಂ, ಸೋಲು ಎಂಬುದು ನಮ್ಮನ್ನು ಕಂಗೆಡಿಸಬಹುದು, ಹತಾಶರನ್ನಾಗಿಸಬಹುದು, ಅಧೀರರನ್ನಾಗಿಸಬಹುದು, ಅಷ್ಟೆ ಹೊರತು ನಮಗೆ ನೋವು ತರಿಸಲಾರದು. ಹಾಗೆ ನೋಡಿದರೆ ಸೋಲೆಂಬುದು ಮನುಷ್ಯನಿಗೆ ಅನುಭವವನ್ನು ಕಲಿಸುತ್ತದೆ. ಗೆಲುವಿಗಾಗಿ ಹಂಬಲಿಸುವ ಛಲವನ್ನು ಹುಟ್ಟುಹಾಕುತ್ತದೆ. ಹೀಗೆ ಯೋಚಿಸಿ ಹೇಳುದಾದರೆ ಸೋಲು ನಮಗೆ ನಮ್ಮವರನ್ನ, ನಮ್ಮ ಶ್ರಮವನ್ನ, ನಮ್ಮ ಬೇಜವಾಬ್ದಾರಿಯನ್ನ, ಮೈಗಳ್ಳತನವನ್ನ ಪರಿಚಯಿಸುತ್ತದೆ. ಆದರೆ ನಿರೀಕ್ಷೆ..? ಎಕ್ಸ್ಪೆಕ್ಟೇಷನ್ ಅನ್ನುವುದಿದೆಯಲ್ಲ ಅದು ನಿಜಕ್ಕೂ ನಮ್ಮ ನೆಮ್ಮದಿಯನ್ನ, ಸಂತೋಷವನ್ನ ಒಮ್ಮೊಮ್ಮೆ ತೃಪ್ತಿಯನ್ನೂ ಕೂಡ ಬಲಿತೆಗೆದುಕೊಂಡುಬಿಡುತ್ತದೆ. ಉಳಿದೆಲ್ಲ ನೋವುಗಳನ್ನ ಹೆಗೋ ಮರ್ತು ಬಿಡಬಹುದು. ಆದರೆ ನಿರೀಕ್ಷೆಯಿಂದಾಗುವ ನೋವಿದೆಯಲ್ಲ ಇದಕ್ಕೆ ಎಸ್ಕೇಪ್ ರೂಟಿಲ್ಲ. ತಮಾಷೆಯ ಸಂಗತಿ ಗೊತ್ತಾ, ಈ ನೋವು ಯಾರ ಸಮಾಧಾನಕ್ಕೂ ಬಗ್ಗುವುದಿಲ್ಲ. ಯಾಕೆಂದರೆ ಸಮಾಧಾನ ಕೂಡ ಇಂಥವರೇ ಮಾಡಬೇಕು ಮತ್ತು ಹೀಗೇ ಮಾಡಬೇಕು ಎನ್ನುವ ನಿರೀಕ್ಷೆ! ಇದಕ್ಕೆ ಎಸ್ಕೇಪ್ ರೂಟಿಲ್ಲ ಅಂತ ಹೇಳಿದನಲ್ಲ ಯಾಕೆ ಗೊತ್ತಾ. ಹೆಂಡತಿಗೆ ಗಂಡನ ಬಗ್ಗೆ, ಗಂಡನಿಗೆ ಹೆಂಡತಿಯ ಬಗ್ಗೆ ಹತ್ತಾರು ನಿರೀಕ್ಷೆಗಳು. ಆದರೆ ಅದು ಸಾಕಾರಗೊಳದಿದ್ದಾಗ ನೋವಾಗುತ್ತದೆ. ತನ್ನ ಹುಟ್ಟಿದ ದಿನದಂದು ಗಂಡ ಒಂದು ಮೊಳ ಮಲ್ಲಿಗೆ ತಂದು ತಾನಾಗಿಯೇ ನನ್ನ ಮುಡಿಗೇರಿಸಲಿ ಎಂಬುದು ಹೆಂಡತಿಯ ನಿರೀಕ್ಷೆ. ಆದರೆ ಗಂಡನಿಗೆ ಹೆಂಡತಿಯ ಬರ್ತ್ಡೇಯೇ ನೆನಪಿಲ್ಲ! ಈ ನೋವಿಂದ ಹೆಂಡತಿ ಎಸ್ಕೇಪ್ ಆಗುವುದಾದರೂ ಹೇಗೆ? ನೋ ವೇ.. ಇಲ್ಲಿ ಆಕೆಯ ನಿರೀಕ್ಷೆ ಹೀಗಿರುತ್ತದೆ ಎನ್ನುವುದು ಗಂಡನಿಗೆ ಹೇಗೆ ಗೊತ್ತಾಗಬೇಕು? ಈ ವಿಚಾರವನ್ನ ಹೆಂಡಿತಿಗೆ ಹೇಳಿದರೆ ರೌದ್ರಾವತಾರ ತಾಳಿಯಾಳು. ಆದ್ರು ಸುಮ್ನೆ ಯೋಚಿಸಿ ನೋಡಿ, ಇದ್ದಕ್ಕಿದ್ದಂತೆ ಒಂದು ರೀತಿ ಅಸಹನೆ ಶುರುವಾಗುತ್ತೆ. ಯಾರು ಏನು ಹೇಳಿದ್ರು ಗುರ್ರ್ ಅಂತೀವಿ.. ಕೊನೆಗೆ ಥತ್ ಯಾರು ಸರಿ ಇಲ್ಲ ಅಂತ ನಮಗೆ ನಾವೇ ಹೇಳಿಕೊಳ್ತೀವಿ. ಈ ಜಗತ್ತಿನಲ್ಲಿ ನನ್ನವರು ಯಾರು ಇಲ್ಲ ಅನ್ಸೋಕೆ ಶುರುವಾಗುತ್ತೆ, ನನ್ನ ಭಾವನೆಗೆ ಬೆಲೆ ಕೊಡೋರು ಒಬ್ಬರು ಇಲ್ಲ ಅಂದ್ಕೋತೀವಿ, ನನ್ನ ಕಂಡ್ರೆ ಯಾರಿಗೂ ಆಗಲ್ಲ ಅನ್ನೋ ಫೀಲ್. ಡಿಯರ್ ರೀಡರ್, ಡೌಟ್ ಬೇಡ ನೀನು ಯಾರಿಂದಲೋ ಏನೋ ನಿರೀಕ್ಷಿಸ್ತಿದೀಯ. ಆ ಕಾರಣಕ್ಕಾಗಿಯೇ ನಿಂಗೆ ಹೀಗೆ ಅನಿಸೋಕೆ ಶುರುವಾಗಿದೆ ಒನ್ ಟೈಮ್ ಜಸ್ಟ್ ಸ್ಟಾಪ್ ಇಟ್. ನೋಡಿ, ಒಳ್ಳೆಯ ಊಟ, ಫಿಲಂ, ಆಟ, ಕಾರ್ಯಕ್ರಮ, ರಿಸಲ್ಟ್, ಸಂಬಂಧ…. ಒಳ್ಳೆಯ ಕಾಲ ಯಾವುದನ್ನ ಬೇಕಾದ್ರು ಎಕ್ಸ್ಪೆಕ್ಟ್ ಮಾಡಿ ನೋ ಪ್ರಾಬ್ಲಂ. ಆದರೆ ಭಾವನೆ ಮತ್ತು ಪ್ರೀತಿ. ಊಹುಂ ಯಾರಿಂದಲೂ ನಿರೀಕ್ಷಿಸಬೇಡಿ. ಮನಸ್ಸಿನ ಭಾಷೆಗೆ ನಿರೀಕ್ಷೆಗಳು ನಿಷಿದ್ಧ.,







