
ನವದೆಹಲಿ: ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆಯನ್ನು ಘೋಷಿಸಿದ್ದು, ಇನ್ನು ಮುಂದೆ ವರ್ಷಕ್ಕೆ ಸಬ್ಸಿಡಿ ಹೊಂದಿರುವ LPG ಸಿಲಿಂಡರ್ ಮರುಪೂರಣಗಳ ಸಂಖ್ಯೆಯನ್ನು 9ರಿಂದ 4ಕ್ಕೆ ಇಳಿಸಿದೆ. ಇದರೊಂದಿಗೆ ಉಜ್ವಲ ಯೋಜನೆಯ 10.60 ಕೋಟಿ ಫಲಾನುಭವಿಗಳು ವರ್ಷಕ್ಕೆ ಕೇವಲ ನಾಲ್ಕು ಸಿಲಿಂಡರ್ಗಳಿಗೆ ಮಾತ್ರ ಹೆಚ್ಚುವರಿ 300 ರೂ. ನೇರ ಸಬ್ಸಿಡಿ ಪಡೆಯಲಿದ್ದಾರೆ. 2016ರಲ್ಲಿ ಆರಂಭವಾದ ಈ ಯೋಜನೆಯಡಿ ಆರಂಭದಲ್ಲಿ ವರ್ಷಕ್ಕೆ 12 ಸಬ್ಸಿಡಿ ಸಿಲಿಂಡರ್ಗಳನ್ನು ನೀಡಲಾಗುತ್ತಿತ್ತು. ಬಳಿಕ ಅದನ್ನು 9ಕ್ಕೆ ಇಳಿಸಲಾಗಿದ್ದು, ಇದೀಗ 4ಕ್ಕೆ ಸೀಮಿತಗೊಳಿಸಲಾಗಿದೆ. ಸರಾಸರಿ ಕುಟುಂಬಗಳ ಬಳಕೆಯನ್ನು ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ಹಾಗೂ ಹಾರ್ಮುಜ್ ಜಲಸಂಧಿ ಮಾರ್ಗದಲ್ಲಿನ ಸವಾಲುಗಳ ನಡುವೆಯೂ ಭಾರತವು ದೇಶದ ಇಂಧನ ಭದ್ರತೆಯನ್ನು ಯಶಸ್ವಿಯಾಗಿ ಕಾಪಾಡಿಕೊಂಡಿದೆ. ಜಾಗತಿಕ ಮಟ್ಟದಲ್ಲಿ ಎಲ್ಪಿಜಿ ಬೆಲೆಗಳು ಶೇ.46ರಷ್ಟು ಏರಿಕೆಯಾಗಿದ್ದರೂ, ಭಾರತೀಯ ತೈಲ ಸಂಸ್ಕರಣಾಗಾರಗಳು ದೇಶೀಯ ಉತ್ಪಾದನೆಯನ್ನು ಶೇ.60ರಷ್ಟು ಹೆಚ್ಚಿಸುವ ಮೂಲಕ ಪೂರೈಕೆಯನ್ನು ಸುಗಮಗೊಳಿಸಿವೆ. ಭಾರತವು ತನ್ನ ಒಟ್ಟು LPG ಅಗತ್ಯದ ಶೇ.70ರಷ್ಟನ್ನು ಹಾರ್ಮುಜ್ ಜಲಸಂಧಿ ಮೂಲಕ ಆಮದು ಮಾಡಿಕೊಳ್ಳುತ್ತಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರವು ಓಮನ್, ಅಮೆರಿಕ ಹಾಗೂ ಆಸ್ಟ್ರೇಲಿಯಾದಿಂದ ಪರ್ಯಾಯ ಪೂರೈಕೆಯನ್ನು ಯಶಸ್ವಿಯಾಗಿ ಆರಂಭಿಸಿದೆ. ಕಳೆದ ನಾಲ್ಕು ದಿನಗಳಲ್ಲಿ ದೇಶಾದ್ಯಂತ ಪ್ರತಿದಿನ ಸರಾಸರಿ 42 ಲಕ್ಷ LPG ಸಿಲಿಂಡರ್ಗಳ ಬುಕಿಂಗ್ ದಾಖಲಾಗಿದ್ದು, ತೈಲ ಕಂಪನಿಗಳು 44 ಲಕ್ಷ ಸಿಲಿಂಡರ್ಗಳ ಪೂರೈಕೆ ಮಾಡುವ ಮೂಲಕ ಬೇಡಿಕೆಯನ್ನು ಸಮರ್ಪಕವಾಗಿ ಪೂರೈಸಿವೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಪ್ರವೀಣ್ ಮಲ್ ಖನುಜಾ ಅವರ ಪ್ರಕಾರ, ಉಜ್ವಲ ಯೋಜನೆಯ ಫಲಾನುಭವಿಗಳು ವರ್ಷಕ್ಕೆ ಸರಾಸರಿ 4 ರಿಂದ 5 ಸಿಲಿಂಡರ್ಗಳನ್ನು ಮಾತ್ರ ಬಳಸುತ್ತಿರುವುದರಿಂದ ನೈಜ ಬಳಕೆಯನ್ನು ಪರಿಗಣಿಸಿ ನಾಲ್ಕು ಸಿಲಿಂಡರ್ಗಳಿಗೆ 300 ರೂ. ಸಬ್ಸಿಡಿ ಮುಂದುವರಿಸಲು ತೀರ್ಮಾನಿಸಲಾಗಿದೆ. ಪ್ರಸ್ತುತ ಒಂದು LPG ಸಿಲಿಂಡರ್ನ ನೈಜ ಪೂರೈಕೆ ವೆಚ್ಚವು 1,600 ರೂ. ಮೀರಿದ್ದರೂ, ಸರ್ಕಾರ ಸಾಮಾನ್ಯ ಗ್ರಾಹಕರಿಗೆ 942 ರೂ. ದರದಲ್ಲಿ ಸಿಲಿಂಡರ್ ಒದಗಿಸುತ್ತಿದೆ. ಅಂದರೆ ಪ್ರತಿ ಸಿಲಿಂಡರ್ಗೆ ಸುಮಾರು 700 ರೂ. ಆಡಳಿತಾತ್ಮಕ ರಿಯಾಯಿತಿ ನೀಡಲಾಗುತ್ತಿದೆ. ಉಜ್ವಲ ಯೋಜನೆ ಫಲಾನುಭವಿಗಳು ಮೊದಲ ನಾಲ್ಕು ಸಿಲಿಂಡರ್ಗಳನ್ನು ಕೇವಲ 642 ರೂ. ದರದಲ್ಲಿ ಪಡೆಯಲಿದ್ದು, ಉಳಿದ ಸಿಲಿಂಡರ್ಗಳಿಗೆ 942 ರೂ. ಪಾವತಿಸಬೇಕಾಗುತ್ತದೆ. ಕಳೆದ ಎರಡು ಹಣಕಾಸು ವರ್ಷಗಳಲ್ಲಿ ಕೇಂದ್ರ ಸರ್ಕಾರ ತೈಲ ಮಾರುಕಟ್ಟೆ ಕಂಪನಿಗಳಿಗೆ ಒಟ್ಟು 52,000 ಕೋಟಿ ರೂ. ಆರ್ಥಿಕ ನೆರವು ನೀಡಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ನಷ್ಟದ ನಡುವೆಯೂ ಗ್ರಾಹಕರ ಮೇಲೆ ಬೆಲೆ ಏರಿಕೆಯ ಹೊರೆ ಬೀಳದಂತೆ ನೋಡಿಕೊಂಡಿದೆ. ಗ್ರಾಮೀಣ ಭಾಗದ ಮಹಿಳೆಯರು ಮರ ಹಾಗೂ ಸಗಣಿಯಂತಹ ಹೊಗೆಭರಿತ ಇಂಧನಗಳಿಂದ ದೂರವಾಗಿ ಶುದ್ಧ ಇಂಧನ ಬಳಕೆಯನ್ನು ಮುಂದುವರಿಸುವ ಉದ್ದೇಶದಿಂದ ಈ ಪರಿಷ್ಕೃತ ನೀತಿ ಜಾರಿಗೊಳಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.





