ಅದೊಂದು ಜೀವಕ್ಕೆ ವಿಶ್ರಾಂತಿ ಇಲ್ಲ….! ಬೆಳಿಗ್ಗೆ ಆರರಿಂದ ರಾತ್ರಿ ಹತ್ತರ ತನಕ ದುಡಿಯಲೇ ಬೇಕು. ರಜೆಯು ಇಲ್ಲ! ಎಷ್ಟು ದುಡಿದರೂ ಯಾವ ಸಂಬಳವು ಸಿಗುವುದಿಲ್ಲ! ಇದೊಂಥರ ಜೀತ ಪದ್ಧತಿ. ಇದು ಎಲ್ಲಿ ಅಂತ ಅಂದ್ಕೋತಿದೀರಾ.. ನಿಮ್ಮ ಮನೆ ವಿಚಾರವನ್ನೇ ನಾನು ಹೇಳುತ್ತಿರುವುದು!
ಕೊಂಚ ಗಮನಿಸಿ ಮತ್ತು ಯೋಚಿಸಿ. ನಮ್ಮೆಲ್ಲರ ಮನೆಗಳಲ್ಲಿ ಬೆಳಿಗ್ಗೆ ಬೆಡ್ ಕಾಫಿಯಿಂದ ಹಿಡಿದು, ರಾತ್ರಿ ಊಟದ ತನಕ ನಮ್ಮ ಅಗತ್ಯಗಳನ್ನೆಲ್ಲ ಪೂರೈಸೋ ಹೆಂಡತಿ, ತಾಯಿ, ಚಿಕ್ಕಮ್ಮ, ದೊಡ್ಡಮ್ಮ, ಅಜ್ಜಿ ಹೀಗೆ ಯಾವುದೋ ಒಂದು ಹೆಣ್ಣು ಜೀವವಿರುತ್ತದಲ್ಲ, ಅವರ ಬಗ್ಗೆಯೇ ನಾನು ಹೇಳ ಹೊರಟಿರುವುದು. ಹೌದಲ್ವಾ ಸ್ನೇಹಿತರೇ, ಪ್ರತಿದಿನ ಆರಕ್ಕೆ ಎದ್ದು ಕಾಫಿ, ತಿಂಡಿ ರೆಡಿ ಮಾಡಿ, ಸ್ನಾನಕ್ಕೆ ನೀರು ಬಿಸಿ ಮಾಡಿ ಗಂಡ, ಮಕ್ಕಳು ಎಲ್ಲರನ್ನು ಹೊರಡಿಸಿ, ಅತ್ತೆ ಮಾವರನ್ನು ಸಂಬಾಳಿಸೋ ಗೃಹಿಣಿಗೆ ತಿಂಗಳ ಸಂಬಳ ಅಂತ ಯಾರಾದ್ರು ಕೊಡ್ತಾರಾ… ಬಿಡಿ. ನಮ್ಮ ವರ್ತನೆಯಾದರೂ ಹೇಗಿರುತ್ತೆ ಹೇಳಿ, ಆಕೆ ಹುಟ್ಟಿದ್ದೇ ನಮ್ಮ ಸೇವೆ ಮಾಡೋದಕ್ಕಾಗಿ ಎಂಬ ರೀತಿ ಮಾತಾಡುತ್ತೇವೆ. ಛೇ ಇದೇನ್ ಕರ್ಮದ್ದು, ಸಾರು ಇಷ್ಟೊಂದು ಖಾರ ಮಾಡಿದ್ದೀಯಾ,…. ಅಯ್ಯೋ ಉಪ್ಪಿಟ್ಟಾ… ಬಿಡು ನಾನು ಹೊರಗಡೆ ತಿಂತೀನಿ ಇದನ್ನ ನೀನೇ ತಿನ್ನು… ಇಂತಹ ಮಾತುಗಳನ್ನೇ ಅಲ್ವಾ ನಾವು ಆಡಿರೋದು. ಇದರಿಂದ ಆಕೆಯ ಮನಸ್ಸಿಗೆ ನೋವಾದೀತು ಎಂಬ ಕಾಮನ್ ಸೆನ್ಸ್ ಕೂಡ ನಮಗಿಲ್ಲ. ನಾವು ಕೆಲ್ಸ ಮಾಡೋ ಕಛೇರಿಯಲ್ಲಿ ಬಾಸ್ ಒಂದರ್ಧ ಗಂಟೆ ಜಾಸ್ತಿ ವರ್ಕ್ ಮಾಡಿ ಅಂದ್ರೆ ಬುಸುಗುಟ್ಟ ತೊಡಗುತ್ತೇವೆ. ಸಂಡೆ ರಜಾ ಬೇಕು, ಹಬ್ಬ ಹರಿದಿನ ನಾವು ಕೆಲ್ಸ ಮಾಡೋದೆ ಇಲ್ಲ. ನಮ್ಗೆ ಬೋನಸ್, ಪ್ರಮೋಷನ್ ಎಲ್ಲವೂ ಬೇಕು. ಆದರೆ ಮನೆಯಲ್ಲಿ ದುಡಿಯೋ ಹೆಣ್ಣಿಗೆ ಇದನ್ನೆಲ್ಲ ಯಾರು ಕೊಡ್ತಾರೆ ಹೇಳಿ. ಕೆಲವರು ಆಕೆಗೆ ಸಹಾಯ ಕೂಡ ಮಾಡಲ್ಲ ಅದೆಷ್ಟು ಮನೆಯ ಹೆಣ್ಣು ಮಕ್ಕಳು ಅಮ್ಮ ಸಹಾಯಕ್ಕೆ ಕರೆದ್ರೆ ನಂಗೆ ಕಾಲೇಜಲ್ಲಿ ಏಳು ಪಿರಿಯಡ್ ಕ್ಲಾಸ್ ಇತ್ತು ಸುಸ್ತಾಗಿದೆ. ಅಂತ ಹೇಳಿ ಬಿಡ್ತಾರೆ! ಪಾಪ ಪಾಠ ಕೇಳಿ ಸುಸ್ತಾಗಿ ಹೋದ ಮಗಳಿಗೆ ಅಮ್ಮ ಕಾಫಿ ಮಾಡಿ ಕೊಡ್ತಾರೆ! ದುಡಿದು ಬರೋ ಗಂಡನನ್ನ, ಓದೋಕೆ ಹೋಗೋ ಮಗಳನ್ನ, ಪೋಲೀ ತಿರುಗೋ ಮಗನ್ನ, ಖಾಯಿಲೆ ಬಿದ್ದ ಅತ್ತೆ ಮಾವರನ್ನ ಸಂಬಾಳಿಸೋ ಆಕೆಯ ತಾಳ್ಮೆಯ ಬಗ್ಗೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ! ಇದನ್ನೆಲ್ಲ ನೀವು ಯಾವತ್ತಾದ್ರು ಯೋಚಿಸಿದ್ದೀರಾ…? ಇಷ್ಟೆಲ್ಲ ಸೇವೆ ಮಾಡೋ ಆಕೆಗೆ ರಾತ್ರಿ ಕೊಂಚ ಅವಳಿಷ್ಟವಾದ ಧಾರವಾಹಿ ನೋಡೋಕಾದ್ರು ಬಿಡ್ತೀರಾ. ರಿಮೋಟ್ ಕಿತ್ತುಕೊಂಡು ಅವಳಿಗೆ ಅರ್ಥವೇ ಆಗದ ಹಿಂದಿ ಚಾನಲ್ ಹಾಕಿ ಬಿಡುತ್ತೀರಿ…. ಹೋಗ್ಲಿ ಆಕೆಯ ಕಣ್ಣಲ್ಲಿ ಕಣ್ಣಿಟ್ಟು ನೋಡಿ ನಿಂಗೆ ಆಯಾಸ ಆಗಿದೆಯಾ? ಅಂತ ಸಣ್ಣ ಕೇರ್ ತೋರ್ಸಿದ್ದೀರಾ… ಅದೂ ಬೇಡ, ಆಕೆಯ ಕೆಲಸದ ಬಗ್ಗೆ ಯಾವತ್ತಾದ್ರು ಒಂದೆರಡು ಮೆಚ್ಚುಗೆಯ ಮಾತಾಡಿದ್ದು ನೆನಪಿದೆಯಾ? ಅದು ಅವಳ ಡ್ಯೂಟಿ ಅಂತ ನೀವಂದುಕೊಂಡಿದ್ದೀರಿ. ಅಫ್ಕೋರ್ಸ್ ಡ್ಯೂಟಿಯೇ ಆದರೂ ದಣಿದ ಜೀವ ಒಂದೆರಡು ಸಾಂತ್ವನದ ಮಾತುಗಳನ್ನು, ಮೆಚ್ಚುಗೆಯ ನುಡಿಯನ್ನು ನಿರೀಕ್ಷಿಸುತ್ತೆ ಅಲ್ವಾ..? ಇಲ್ಲಿಯವರೆಗೆ ಆದದ್ದು ಬಿಡಿ. ನಾಡಿದ್ದು ಸಂಕ್ರಾಂತಿಯಲ್ಲಿ ಆಕೆಯ ಕೆಲಸದಲ್ಲಿ ನೀವು ಕೈ ಜೋಡಿಸಿ. ಆಕೆಗೊಂದು ಸೀರೆ ತಂದು ಕೊಡಿ ಅವಳ ಸಂಭ್ರಮ ಹೇಗಿರುತ್ತೆ ನೋಡಿ. ವರ್ಷವಿಡೀ ನಮಗಾಗಿ ದುಡಿಯೋ ಆಕೆಗೆ ಇಂತಹ ಸಣ್ಣ ಸಣ್ಣ ಸಂತೋಷವನ್ನಾದ್ರು ಕೊಡದಿದ್ರೆ ಹೇಗೆ, ಅದಕ್ಕಿಂತ ಹೆಚ್ಚಾಗಿ ಹಾಗೆ ಮಾಡಿದ್ರೆ ನಿಮ್ಮ ಮನಕ್ಕೊಂದು ದಿವ್ಯ ಆನಂದ ಸಿಗುತ್ತೆ ಅದನ್ನ ನಂಗೆ ಹೇಳಿ.
