
ಬೆಂಗಳೂರು : ರಾಜ್ಯಾದ್ಯಂತ ನಾಳೆ (ಮೇ 20) ಸಾರಿಗೆ ನೌಕರರ ಮುಷ್ಕರದ ಆತಂಕದ ನಡುವೆಯೇ ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ದೇಶಾದ್ಯಂತ ಖಾಸಗಿ ಮೆಡಿಕಲ್ ಶಾಪ್ ಬಂದ್ಗೆ ಕರೆ ನೀಡಲಾಗಿದೆ. ಆನ್ಲೈನ್ ಮೂಲಕ ನಿಯಮಬಾಹಿರ ಔಷಧ ಮಾರಾಟ ಹಾಗೂ ಭಾರಿ ರಿಯಾಯಿತಿ ನೀಡುವ ಕ್ರಮವನ್ನು ವಿರೋಧಿಸಿ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿವೆ. ಕರ್ನಾಟಕದಲ್ಲೂ ಕೆಸಿಡಿಎ ಸೇರಿದಂತೆ ಹಲವು ಔಷಧ ವ್ಯಾಪಾರಿಗಳ ಸಂಘಟನೆಗಳು ಬಂದ್ಗೆ ಬೆಂಬಲ ಸೂಚಿಸಿದ್ದು, ಕರ್ನಾಟಕ ಫಾರ್ಮಾ ರಿಟೇಲರ್ಸ್ ಮತ್ತು ಡಿಸ್ಟ್ರಿಬ್ಯೂಟರ್ಸ್ ಆರ್ಗನೈಸೇಷನ್ (KPRDO) ಸೇರಿದಂತೆ ಹಲವು ಒಕ್ಕೂಟಗಳು ನೈತಿಕ ಬೆಂಬಲ ಘೋಷಿಸಿವೆ. ಯಾವುದೇ ಸೂಕ್ತ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ರಾಜಾರೋಷವಾಗಿ ಔಷಧ ಮಾರಾಟ ನಡೆಯುತ್ತಿರುವುದು ಸಾರ್ವಜನಿಕರ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ ಹಾಗೂ ಸಣ್ಣ ಮೆಡಿಕಲ್ ಶಾಪ್ಗಳ ಬದುಕಿಗೆ ಹೊಡೆತ ನೀಡುತ್ತಿದೆ ಎಂದು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ದೊಡ್ಡ ಕಾರ್ಪೊರೇಟ್ ಕಂಪನಿಗಳು ಭಾರಿ ಡಿಸ್ಕೌಂಟ್ ನೀಡಿ ಗ್ರಾಹಕರನ್ನು ಸೆಳೆಯುತ್ತಿರುವುದರಿಂದ ಸಾಂಪ್ರದಾಯಿಕ ಮೆಡಿಕಲ್ ಶಾಪ್ಗಳು ನಷ್ಟ ಅನುಭವಿಸುತ್ತಿವೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮೇ 20ರಂದು ದಿನಪೂರ್ತಿ ಖಾಸಗಿ ಮೆಡಿಕಲ್ ಶಾಪ್ಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದ್ದು, ಆಸ್ಪತ್ರೆ ಆವರಣದೊಳಗಿನ ಫಾರ್ಮಸಿಗಳು ಮಾತ್ರ ಎಂದಿನಂತೆ ಕಾರ್ಯನಿರ್ವಹಿಸಲಿವೆ. ಹೀಗಾಗಿ ತುರ್ತು ಪರಿಸ್ಥಿತಿ ಎದುರಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಜನರು ಅಗತ್ಯ ಔಷಧಗಳನ್ನು ಮುಂಚಿತವಾಗಿಯೇ ಖರೀದಿಸಿಟ್ಟುಕೊಳ್ಳುವುದು ಒಳಿತು ಎಂದು ಸಂಘಟನೆಗಳು ಮನವಿ ಮಾಡಿವೆ.




