
ಚಿಕ್ಕಮಗಳೂರು: ಜಿಲ್ಲೆಯ ಕಾಫಿನಾಡು ಮಲೆನಾಡು ಭಾಗದಲ್ಲಿ ಪುನರ್ವಸು ಮಳೆಯ ಅಬ್ಬರ ಮುಂದುವರಿದಿದ್ದು, ಮೂಡಿಗೆರೆ ತಾಲೂಕಿನ ಸುತ್ತಮುತ್ತ ಕಳೆದ 24 ಗಂಟೆಗಳಲ್ಲಿ ಧಾರಾಕಾರ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿದೆ. ಕೊಟ್ಟಿಗೆಹಾರ, ಬಣಕಲ್, ಬಾಳೂರು ಹಾಗೂ ಚಾರ್ಮಾಡಿ ಘಾಟ್ ತಪ್ಪಲು ಪ್ರದೇಶಗಳಲ್ಲಿ ಬೆಳಗ್ಗೆಯಿಂದಲೇ ಒಂದೇ ಸಮನೆ ಭಾರೀ ಮಳೆ ಸುರಿಯುತ್ತಿದ್ದು, ಬಿರುಸಿನ ಗಾಳಿಯಿಂದ ಮಲೆನಾಡಿಗರು ಹೈರಾಣಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ದೇವರಮನೆ ಪ್ರದೇಶದಲ್ಲಿ 11 ಇಂಚು, ಕೊಟ್ಟಿಗೆಹಾರದಲ್ಲಿ 10 ಇಂಚು, ಊರಬಗೆ 8 ಇಂಚು, ಗೌಡಹಳ್ಳಿ 8.05 ಇಂಚು, ಹೆಸಗೋಡು 8 ಇಂಚು, ಬಣಕಲ್ನಲ್ಲಿ 6.5 ಇಂಚು ಹಾಗೂ ಬಾಳೂರು ಮತ್ತು ಕಳಸದಲ್ಲಿ ತಲಾ 5 ಇಂಚು ಮಳೆ ದಾಖಲಾಗಿದೆ. ನಿರಂತರ ಗಾಳಿ-ಮಳೆಯ ಪರಿಣಾಮ ಬಾಳೂರು-ಹೊರಟ್ಟಿ ಗ್ರಾಮದಲ್ಲಿ ಅನಿತಾ ಡಯಾಸ್ ಅವರ ಮನೆ ಮೇಲೆ ಮರ ಉರುಳಿ ಮನೆ ಜಖಂಗೊಂಡಿದ್ದು, ದೇವನಗೂಲ್ ಗ್ರಾಮದಲ್ಲಿ ಪ್ರತಾಪ್ ಅವರ ಮನೆ ಮೇಲೂ ಮರ ಬಿದ್ದು ಹಾನಿಯಾಗಿದೆ. ಇದೇ ಗ್ರಾಮದಲ್ಲಿ ಮನೆ ಸಮೀಪದ ಗುಡ್ಡ ಜರಿಯತೊಡಗಿದ್ದು, ಘಟ್ಟ ಪ್ರದೇಶಗಳ ಕೆಳಭಾಗದಲ್ಲಿ ವಾಸಿಸುವ ಜನರಲ್ಲಿ ಗುಡ್ಡ ಕುಸಿತದ ಭೀತಿ ಮತ್ತಷ್ಟು ಹೆಚ್ಚಿದೆ. ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆ ಹಾಗೂ ಬಿರುಸಿನ ಗಾಳಿಯಿಂದ ರಸ್ತೆ ಸಂಚಾರ, ಜನಜೀವನ ಮತ್ತು ದೈನಂದಿನ ಚಟುವಟಿಕೆಗಳಿಗೆ ತೀವ್ರ ಅಡಚಣೆ ಉಂಟಾಗಿದ್ದು, ಮಲೆನಾಡು ಭಾಗದ ಜನರು ಆತಂಕದಲ್ಲೇ ದಿನ ಕಳೆಯುವಂತಾಗಿದೆ. ಮಳೆ ಇದೇ ರೀತಿ ಮುಂದುವರಿದರೆ ಮತ್ತಷ್ಟು ಅನಾಹುತ ಸಂಭವಿಸುವ ಸಾಧ್ಯತೆ ಇರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.



