
ಶೃಂಗೇರಿ: 2026ರ ಏಷ್ಯನ್ ಗೇಮ್ಸ್ನಲ್ಲಿ ಕಂಚಿನ ಪದಕ ಗೆದ್ದು ದೇಶದ ಕೀರ್ತಿ ಹೆಚ್ಚಿಸಿದ ಕರ್ನಾಟಕದ ಹೆಮ್ಮೆಯ ಕ್ರೀಡಾಪಟು ಸ್ನೇಹ ಎಸ್.ಎಸ್. ಅವರಿಗೆ ಶಾಸಕರಿಂದ ಅದ್ಧೂರಿ ಗೌರವ ಸ್ವಾಗತ ನೀಡಲಾಯಿತು. ಶೃಂಗೇರಿ ಕ್ಷೇತ್ರದ ಶಾನುವಳ್ಳಿ ಗ್ರಾಮದ ಸ್ನೇಹ ಅವರನ್ನು ಶಾಸಕರು ಆತ್ಮೀಯವಾಗಿ ಬರಮಾಡಿಕೊಂಡು, ರಾಷ್ಟ್ರಧ್ವಜ ಹೊದಿಸಿ, ಶಾಲು–ಹಾರ ಹಾಕಿ ಹಾಗೂ ಕುಂಕುಮ ಇಟ್ಟು ಸನ್ಮಾನಿಸಿ, ಅವರ ಸಾಧನೆಗೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದರು. ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತದ ಗೌರವವನ್ನು ಎತ್ತಿಹಿಡಿದಿರುವ ಸ್ನೇಹ ಎಸ್.ಎಸ್. ಅವರ ಸಾಧನೆ ಕರ್ನಾಟಕ, ಶೃಂಗೇರಿ ಕ್ಷೇತ್ರ ಹಾಗೂ ಶಾನುವಳ್ಳಿ ಗ್ರಾಮದ ಹೆಮ್ಮೆಯನ್ನು ಹೆಚ್ಚಿಸಿದೆ ಎಂದು ಶಾಸಕರು ಶ್ಲಾಘಿಸಿದರು. ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಮಹತ್ತರ ಸಾಧನೆಗಳನ್ನು ಮಾಡುವ ಮೂಲಕ ದೇಶದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಸ್ನೇಹ ಅವರಿಗೆ ಶುಭ ಹಾರೈಸಿದರು.




