ಚಿಕ್ಕಮಗಳೂರು: ನಗರದಲ್ಲಿ ಬಾರ್ ಕ್ಯಾಶಿಯರ್ ತೇಜಸ್ವಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಚಿಕ್ಕಮಗಳೂರು ನಗರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ರುದ್ರ, ವೀರಶೇಖರ್, ವಿನಿ ಹಾಗೂ ಹನುಮಂತ ಬಂಧಿತ ಆರೋಪಿಗಳಾಗಿದ್ದು, ರುದ್ರ ಕೊಲ್ಕತ್ತಾ ಮೂಲದವನು, ವೀರಶೇಖರ್ ಆಂಧ್ರಪ್ರದೇಶದ ಅದೋನಿಯವನಾಗಿದ್ದು, ವಿನಿ ತುಮಕೂರು ಹಾಗೂ ಹನುಮಂತ ಸ್ಥಳೀಯನಾಗಿದ್ದಾನೆ. ಬಾರ್ ಕ್ಯಾಶಿಯರ್ ತೇಜಸ್ವಿಗೆ ಹಲ್ಲೆ ನಡೆಸಿ ಗ್ರೌಂಡ್ ಗೆ ಎಸೆದಿದ್ದ ಆರೋಪಿಗಳು ಪರಾರಿಯಾಗಿದ್ದರು. ಬಳಿಕ ಬೆಳಗ್ಗೆ ಉಸಿರಾಡುತ್ತಿದ್ದ ಸ್ಥಿತಿಯಲ್ಲಿ ಕಂಡು ಆಟೋ ಚಾಲಕರೊಬ್ಬರು ತೇಜಸ್ವಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೂ ಚಿಕಿತ್ಸೆ ಫಲಕಾರಿಯಾಗದೆ ತೇಜಸ್ವಿ ಸಾವನ್ನಪ್ಪಿದ್ದು, ಈ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಿ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.
