
ಕೊಟ್ಟಿಗೆಹಾರ: ಮೂಡಿಗೆರೆ ತಾಲೂಕಿನ ಕಸಬಾ ಹೋಬಳಿಯ ಹಂಡುಗುಳಿ ಗ್ರಾಮದ ಸಾರ್ವಜನಿಕ ರಸ್ತೆ ಬದಿಯಲ್ಲಿ ಅಕ್ರಮವಾಗಿ ಟೀಕ್ ಜಾತಿಯ ಮರದ ದಿಮ್ಮಿಗಳನ್ನು ಸಂಗ್ರಹಿಸಿದ್ದ ಪ್ರಕರಣವನ್ನು ಅರಣ್ಯ ಇಲಾಖೆ ಪತ್ತೆಹಚ್ಚಿದೆ. ಬೀಟ್ ಸಿಬ್ಬಂದಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಅಧಿಕಾರಿಗಳು ಸ್ಥಳಕ್ಕೆ ದಾಳಿ ನಡೆಸಿ ಪರಿಶೀಲಿಸಿದ ವೇಳೆ ಒಟ್ಟು 46 ಟೀಕ್ ಮರದ ದಿಮ್ಮಿಗಳು ಪತ್ತೆಯಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ರಂಗಸ್ವಾಮಿ ಹಾಗೂ ಇತರರು ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಟೀಕ್ ಮರಗಳನ್ನು ಕಡಿದು ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ. ಅಧಿಕಾರಿಗಳು ಸ್ಥಳದಲ್ಲಿದ್ದ ಮರದ ದಿಮ್ಮಿಗಳನ್ನು ವಶಪಡಿಸಿಕೊಂಡು, ಸಾಗಣೆಗೆ ಬಳಸಲಾಗಿದ್ದ KA-06-C-7127 ನೋಂದಣಿ ಸಂಖ್ಯೆಯ ವಾಹನವನ್ನು ಜಪ್ತಿ ಮಾಡಿದ್ದಾರೆ. ಜಪ್ತಿ ಮಾಡಿದ ಟೀಕ್ ಮರದ ದಿಮ್ಮಿಗಳ ಮೌಲ್ಯ ಸುಮಾರು ₹1.70 ಲಕ್ಷ ಹಾಗೂ ವಾಹನದ ಮೌಲ್ಯ ಸುಮಾರು ₹16 ಲಕ್ಷ ಎಂದು ಅಂದಾಜಿಸಲಾಗಿದ್ದು, ಒಟ್ಟಾರೆ ₹17.70 ಲಕ್ಷ ಮೌಲ್ಯದ ಆಸ್ತಿ ಜಪ್ತಿಯಾಗಿದೆ. ಈ ಸಂಬಂಧ ಅರಣ್ಯ ಮೊಕದ್ದಮೆ ಸಂಖ್ಯೆ 18/2026-27 ದಾಖಲಿಸಿ, ಅರಣ್ಯ ಕಾಯ್ದೆಯಡಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದ ಆರೋಪಿಗಳಾಗಿ ರಂಗಸ್ವಾಮಿ (46) ಹೊಸೆಕೋಟೆ, ಶಿವಪ್ಪ (49) ಹೆಡೆಮುಗಿಗೆರೆ, ಪ್ರಶಾಂತ್ (53) ಮುತಿನಗಿರಿ, ಚಂದ್ರಶೇಖರ್ (32) ಗೊಣಿಬೀಡು, ರಮೇಶ್ (40) ಜೋಗೆಳ್ಳಿಕಟ್ಟೆ, ಹಾಗೂ ಚಂದ್ರಶೀಲ (70), ಹೊಸೆಕೋಟೆ ಅವರನ್ನು ಗುರುತಿಸಲಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಅಕ್ರಮ ಮರ ಸಾಗಣೆ ವಿರುದ್ಧ ಯಶಸ್ವಿ ಕಾರ್ಯಾಚರಣೆ ನಡೆಸಿದ್ದು, ಅರಣ್ಯ ಸಂಪತ್ತಿನ ಸಂರಕ್ಷಣೆಗೆ ಇಂತಹ ಅಕ್ರಮ ಚಟುವಟಿಕೆಗಳ ವಿರುದ್ಧ ನಿರಂತರವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.




