ಕೊಟ್ಟಿಗೆಹಾರ: ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ದೇವನಗುಲ್ ಬಳಿ ಹೆದ್ದಾರಿ ಪಕ್ಕದಲ್ಲಿದ್ದ ಬೃಹತ್ ಮರವು ಏಕಾಏಕಿ ಕುಸಿದು ವಿದ್ಯುತ್ ಕಂಬದ ಮೇಲೆ ಬಿದ್ದ ಪರಿಣಾಮ ಮೂರು ವಿದ್ಯುತ್ ಕಂಬಗಳು ರಸ್ತೆಗೆ ಉರುಳಿ ಬಿದ್ದ ಘಟನೆ ಸೋಮವಾರ ನಡೆದಿದೆ. ಘಟನೆ ಸಂಭವಿಸುವುದಕ್ಕೂ ಸುಮಾರು 10 ಸೆಕೆಂಡ್ ಮೊದಲು ಅದೇ ಮಾರ್ಗದಲ್ಲಿ 50–60 ಪ್ರಯಾಣಿಕರನ್ನು ಹೊತ್ತ ಸರ್ಕಾರಿ ಬಸ್ ಸಂಚರಿಸುತ್ತಿದ್ದು, ಮರ ಕುಸಿತದ ತೀವ್ರ ಅಪಾಯದಿಂದ ಬಸ್ ಹಾಗೂ ಪ್ರಯಾಣಿಕರು ಅದೃಷ್ಟವಶಾತ್ ಪಾರಾಗಿದ್ದಾರೆ. ಮರ ಮತ್ತು ವಿದ್ಯುತ್ ಕಂಬಗಳು ರಸ್ತೆಗೆ ಅಡ್ಡವಾಗಿ ಬಿದ್ದ ಪರಿಣಾಮ ಹೆದ್ದಾರಿ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡು ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿ, ಕೆಲಕಾಲ ರಸ್ತೆ ಎರಡೂ ಬದಿಗಳಲ್ಲಿ ವಾಹನಗಳು ನಿಂತುಕೊಂಡು ಸಂಚಾರ ಸ್ಥಗಿತಗೊಂಡಿತ್ತು. ಘಟನೆ ಕುರಿತು ಮಾಹಿತಿ ತಿಳಿದು ಸ್ಥಳೀಯರು ಹಾಗೂ ಮೆಸ್ಕಾಂ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ವಿದ್ಯುತ್ ಲೈನ್ಗಳನ್ನು ಸುರಕ್ಷಿತವಾಗಿ ತೆರವುಗೊಳಿಸಿ, ರಸ್ತೆಗೆ ಬಿದ್ದ ಕಂಬಗಳನ್ನು ತೆರವುಗೊಳಿಸಿ ಸಂಚಾರವನ್ನು ಪುನಃ ಸ್ಥಾಪಿಸಿದರು.
