
ಚಿಕ್ಕಮಗಳೂರು : ಕೊಪ್ಪ ತಾಲೂಕು ಕಾಂಗ್ರೆಸ್ನಲ್ಲಿ ಅಸಮಾಧಾನದ ಕಿಡಿ ಭುಗಿಲೆದ್ದಿದೆ. ಶಾಸಕ ಟಿ.ಡಿ. ರಾಜೇಗೌಡರ ಕಾರ್ಯವೈಖರಿ ಹಾಗೂ ಜಿಲ್ಲಾ ಪಂಚಾಯಿತಿ ಟಿಕೆಟ್ ಹಂಚಿಕೆ ವಿಚಾರವಾಗಿ ಕಾಂಗ್ರೆಸ್ನ ಇಬ್ಬರು ಮುಖಂಡರಾದ ಕುದುರೆಗುಂಡಿ ದೀಪಕ್ ಮತ್ತು ನವೀನ್ ಕರುವಾನೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷಕ್ಕಾಗಿ ವರ್ಷಗಳಿಂದ ದುಡಿದವರಿಗೆ ಬೆಲೆಯಿಲ್ಲವೇ? ಪಕ್ಷ ಸಂಘಟನೆಗಾಗಿ ಸ್ವಂತ ಹಣ ಖರ್ಚು ಮಾಡಿ ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸಕ್ಕೆ ಮಾತ್ರ ನಮ್ಮನ್ನು ಸೀಮಿತಗೊಳಿಸಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಹಲವು ನಾಮನಿರ್ದೇಶನಗಳ ವಿಚಾರದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ, ಇದೀಗ ಜಿಲ್ಲಾ ಪಂಚಾಯಿತಿ ಟಿಕೆಟ್ ವಿಚಾರದಲ್ಲಿಯೂ ಶಾಸಕರ ದ್ವಂದ್ವ ನಿಲುವು ಬೇಸರ ತಂದಿದೆ ಎಂಬುದು ದೀಪಕ್ ಅವರ ಆರೋಪ. ಮತ್ತೊಂದೆಡೆ, ಬಿಜೆಪಿ ಆಡಳಿತದ ಅವಧಿಯಲ್ಲೂ ರೈತರ ಪರವಾಗಿ ಹೋರಾಟ ನಡೆಸಿ ಕಾಂಗ್ರೆಸ್ ಸಂಘಟನೆಗೆ ಶ್ರಮಿಸಿದ್ದೇವೆ. ಆದರೆ ಹರಿಹರಪುರ ಹೋಬಳಿಯಲ್ಲಿ ತಾಲೂಕು ಪಂಚಾಯಿತಿಗೆ ಒಂದೇ ಒಂದು ಸಾಮಾನ್ಯ ವರ್ಗದ ಕ್ಷೇತ್ರ ಇಲ್ಲದಿರುವುದು ಅನ್ಯಾಯ ಎಂದು ನವೀನ್ ಕರುವಾನೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೊಸಬರಿಗೆ ಅವಕಾಶ ನೀಡುವುದಕ್ಕೆ ನಮ್ಮ ವಿರೋಧವಿಲ್ಲ, ಆದರೆ ಪಕ್ಷಕ್ಕಾಗಿ ದುಡಿದ ಹಳೆಯ ಕಾರ್ಯಕರ್ತರನ್ನು ಕಡೆಗಣಿಸಬಾರದು, ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬುದು ಇಬ್ಬರ ಒತ್ತಾಯವಾಗಿದೆ. ಕೊಪ್ಪ ಕಾಂಗ್ರೆಸ್ನಲ್ಲಿ ಬಣ ರಾಜಕೀಯ ಹೆಚ್ಚಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದ್ದು, ಚುನಾವಣೆಯ ಹೊಸ್ತಿಲಲ್ಲಿ ಇಬ್ಬರು ಪ್ರಭಾವಿ ಮುಖಂಡರ ಬಹಿರಂಗ ಅಸಮಾಧಾನ ಸ್ಥಳೀಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಬೆಳವಣಿಗೆಗೆ ಶಾಸಕ ಟಿ.ಡಿ. ರಾಜೇಗೌಡರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.




