
ಚಿಕ್ಕಮಗಳೂರು: ಜಿಲ್ಲೆಯ ಕೊಟ್ಟಿಗೆಹಾರ ಸಮೀಪದ ಬಣಕಲ್ ಪೊಲೀಸ್ ಠಾಣೆಯಲ್ಲಿ ಟ್ರಿನಿಟಿ ರಕ್ತಕೇಂದ್ರದ ವತಿಯಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು. ಶಿಬಿರದಲ್ಲಿ ಮಾತನಾಡಿದ ಬಣಕಲ್ ಪೊಲೀಸ್ ಠಾಣೆಯ ಪಿಎಸ್ಐ ದಿಲೀಪ್, ಪರ್ಯಾಯವಾಗಿ ತಯಾರಿಸಲಾಗದ ರಕ್ತವನ್ನು ದಾನ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದ್ದು, ಎಲ್ಲರೂ ರಕ್ತದಾನದ ಮಹತ್ವವನ್ನು ಅರಿತು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಬೇಕು ಎಂದು ಕರೆ ನೀಡಿದರು. ಒಬ್ಬ ವ್ಯಕ್ತಿ ನೀಡುವ ಒಂದು ಯೂನಿಟ್ ರಕ್ತವನ್ನು ಆರ್ಬಿಸಿ, ಪ್ಲೇಟ್ಲೇಟ್ ಹಾಗೂ ಪ್ಲಾಸ್ಮಾ ಎಂದು ವಿಭಜಿಸಿ ಮೂರು ಜೀವಗಳನ್ನು ಉಳಿಸಬಹುದಾಗಿದೆ. ಜೊತೆಗೆ ರಕ್ತದಾನದಿಂದ ಹೊಸ ರಕ್ತಕಣಗಳ ಉತ್ಪತ್ತಿಯಾಗುವುದರೊಂದಿಗೆ ಹೃದಯಾಘಾತದ ಅಪಾಯವೂ ಕಡಿಮೆಯಾಗುತ್ತದೆ ಎಂದು ಅವರು ತಿಳಿಸಿದರು. ಶಿಬಿರದಲ್ಲಿ 30ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಟ್ರಿನಿಟಿ ರಕ್ತಕೇಂದ್ರದ ಡಾ.ಗೆನ್, ಸುನೀಲ್, ಸೀಮಾ, ಪೊಲೀಸ್ ಸಿಬ್ಬಂದಿಗಳಾದ ಅಭಿಷೇಕ್, ಮಹೇಶ್, ಸತೀಶ್, ದಿಲೀಪ್, ಪವಿತ್ರ, ಓಂಕಾರ್, ಶ್ರೀದರ್, ಸುಧಾ, ನಾಗಪ್ಪ, ಸಂತೋಷ್, ಸುಷ್ಮಾ, ಗ್ರಾಮಸ್ಥರಾದ ಮಧುಕುಮಾರ್, ಸಚಿನ್, ಮಿಥುನ್, ಅರುಣ್, ಗೌತಮ್ ಕೋಗಿಲೆ, ವಿನುತ್ ಮುಂತಾದವರು ಉಪಸ್ಥಿತರಿದ್ದು, ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸಿದರು.
ವರದಿ: ಸಂತೋಷ್ ಅತ್ತಿಗೆರೆ




